ಕಾಶ್ಮೀರ, ಫೆಲೆಸ್ತೀನ್ನಲ್ಲಿನ ದುರಂತಗಳನ್ನು ಜಗತ್ತು ಕಡೆಗಣಿಸಬಾರದು : ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಆಗ್ರಹ

Photo: AP/File
ಇಸ್ಲಮಾಬಾದ್, ಸೆ.21: ಫೆಲೆಸ್ತೀನ್ ಮತ್ತು ಭಾರತೀಯ ಆಡಳಿತದ ಕಾಶ್ಮೀರದಲ್ಲಿನ ಮಾನವೀಯ ದುರಂತಗಳನ್ನು ಕಡೆಗಣಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಆಗ್ರಹಿಸಿದ್ದಾರೆ.
ಭಾರತವು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರ ಮತ್ತು ಫೆಲೆಸ್ತೀನಿಯನ್ ಪ್ರದೇಶಗಳಲ್ಲಿನ ಗಂಭೀರ ಮಾನವೀಯ ದುರಂತಗಳನ್ನು ಕಡೆಗಣಿಸಲಾಗದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗಳ ನಿರ್ಣಯಗಳಿಗೆ ಅನುಗುಣವಾಗಿ ಈ ಪ್ರದೇಶದ ಜನರಿಗೆ ಸ್ವಯಂ ನಿರ್ಣಯದ ಹಕ್ಕನ್ನು ನೀಡುವವರೆಗೆ ಶಾಶ್ವತ ಶಾಂತಿ ಒಂದು ಅಸ್ಪಷ್ಟ ಕನಸಾಗಿ ಉಳಿಯುತ್ತದೆ. ಶಾಂತಿಯನ್ನು ಸ್ಥಾಪಿಸುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲು ಪಾಕಿಸ್ತಾನ ಸಿದ್ಧವಿದೆ. ಶಾಂತಿ, ನ್ಯಾಯ ಮತ್ತು ಮಾನವೀಯತೆಯ ಹೋರಾಟದಲ್ಲಿ ಅಂತರಾಷ್ಟ್ರೀಯ ಸಮುದಾಯ ಕೈಜೋಡಿಸಬೇಕು' ಎಂದು ಆಗ್ರಹಿಸಿರುವುದಾಗಿ ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.
ಭಾರತವು ಹಗೆತನ ಮತ್ತು ಉತ್ತಮ ನೆರೆಹೊರೆ ಸಂಬಂಧಗಳ ನಡುವೆ ಆಯ್ಕೆ ಮಾಡಿಕೊಳ್ಳಬೇಕು. ಭಾರತದೊಂದಿಗಿನ ಯಾವುದೇ ಮಾತುಕತೆಗಳು ಸಮಾನ ಪರಿಭಾಷೆಯಲ್ಲಿರುತ್ತವೆ ಎಂದು ಇದೇ ವೇಳೆ ಅವರು ಪ್ರತಿಪಾದಿಸಿರುವುದಾಗಿ ವರದಿಯಾಗಿದೆ.





