ಉತ್ತರಾಕಾಶಿಯನ್ನು ನಡುಗಿಸಿದ ಅವಳಿ ಭೂಕಂಪ | ಭೀತಿಯಿಂದ ಮನೆಯಿಂದ ಹೊರಗೆ ಓಡಿ ಬಂದ ನಿವಾಸಿಗಳು

ಸಾಂದರ್ಭಿಕ ಚಿತ್ರ
ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಎರಡು ಅವಳಿ ಭೂಕಂಪಗಳು ಸಂಭವಿಸಿದ ಬಳಿಕ ಭೀತರಾದ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು.
ಭೂಕಂಪ ಸಂಭವಿಸಿದ ಕೂಡಲೇ ಮೌಂಟ್ ವರುಣಾವೃತದಲ್ಲಿ ಭೂಕುಸಿತ ಸಂಭವಿಸಿರುವುದು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಜೀವ ಅಥವಾ ಸೊತ್ತು ಹಾನಿ ಆದ ಬಗ್ಗೆ ವರದಿಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ಕಚೇರಿ ತಿಳಿಸಿದೆ.
ಉತ್ತರಕಾಶಿಯ ನಿವಾಸಿಗಳಿಗೆ ಶುಕ್ರವಾರ ಬೆಳಗ್ಗೆ ಎರಡು ಭೂಕಂಪಗಳ ಅನುಭವವಾಯಿತು. ಮೊದಲ ಭೂಕಂಪ ಬೆಳಗ್ಗೆ ಸರಿಸುಮಾರು 7.41ಕ್ಕೆ ಸಂಭವಿಸಿತು. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.7 ದಾಖಲಾಗಿತ್ತು. ಇದು ಜಿಲ್ಲಾ ಕೇಂದ್ರ ಸಮೀಪ ಕೇಂದ್ರವನ್ನು ಹೊಂದಿತ್ತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಜೈ ಪ್ರಕಾಶ್ ಸಿಂಗ್ ಪನ್ವಾರ್ ತಿಳಿಸಿದ್ದಾರೆ.
ಆರಂಭದ ಭೂಕಂಪ ಈ ವಲಯದಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿತು. ಇಲ್ಲಿನ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಮನೆಯಿಂದ ಹೊರಗೆ ಓಡಿ ಬಂದರು. ಇದು ಸಂಭವಿಸಿದ ಅರ್ಧ ಗಂಟೆ ಬಳಿಕ ಬೆಳಗ್ಗೆ 8.29ಕ್ಕೆ ಇನ್ನೊಂದು ಭೂಕಂಪ ಸಂಭವಿಸಿತು. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5 ದಾಖಲಾಗಿತ್ತು. ಈ ಭೂಕಂಪ ಗಂಗೋತ್ರಿ ಭಟ್ವಾರಿಯ ಬರ್ಸುನ ಅರಣ್ಯದಲ್ಲಿ ಕೇಂದ್ರ ಹೊಂದಿತ್ತು ಎಂದು ಪನ್ವಾರ್ ತಿಳಿಸಿದ್ದಾರೆ.
ಈ ಭೂಕಂಪದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತದ ಅಧಿಕಾರಿಗಳು ಎಚ್ಚರಿಕೆ ವಹಿಸುವಂತೆ ಹಾಗೂ ಸುರಕ್ಷಿತ ಪ್ರದೇಶಗಳಲ್ಲಿ ಆಶ್ರಯ ಪಡೆದುಕೊಳ್ಳುವಂತೆ ನಿವಾಸಿಗಳನ್ನು ಆಗ್ರಹಿಸಿದ್ದಾರೆ.







