ಜಾಮೀನು ಬಿಡುಗಡೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಲೇರಿದ ಶರ್ಜಿಲ್ ಇಮಾಮ್

ಶರ್ಜಿಲ್ ಇಮಾಮ್ | PTI
ಹೊಸದಿಲ್ಲಿ,ಸೆ.66: 2020ರ ದಿಲ್ಲಿ ಗಲಭೆ ಸಂಚಿಗೆ ಸಂಬಂಧಿಸಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾದ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ (ಯುಎಪಿಎ)ಯಡಿ ತನಗೆ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಶರ್ಜಿಲ್ ಇಮಾಮ್ ಅವರು ಶನಿವಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ದಿಲ್ಲಿ ಗಲಭೆ ಸಂಚು ಪ್ರಕರಣದ ಆರೋಪಿಗಳಾದ ಶರ್ಜಿಲ್ ಇಮಾಮ್, ಉಮರ್ ಖಾಲೀದ್, ಮುಹಮ್ಮದ್ ಸಲೀಂ ಖಾನ್, ಶಿಫಾವುರ್ರಹ್ಮಾನ್, ಆತರ್ ಖಾನ್, ಮಿರಾನ್ ಹೈದರ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ಗುಲ್ಫಿಶಾ ಫಾತಿಮಾ ಅವರು ಜಾಮೀನು ಬಿಡುಗಡೆಕೋರಿ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ನವೀನ್ಚಾವ್ಲಾ ಹಾಗೂ ಶಾಲಿಂದರ್ ಕೌರ್ ಅವರನ್ನೊಳಗೊಂಡ ನ್ಯಾಯಪೀಠವು ಮಂಗಳವಾರ ತಿರಸ್ಕರಿಸಿತ್ತು.
ಜಾಮೀನು ಬಿಡುಗಡೆ ಕೋರಿ ಆರೋಪಿಗಳು ಸಲ್ಲಿಸಿದ ಅರ್ಜಿಗಳನ್ನು ಪ್ರಾಸಿಕ್ಯೂಶನ್ ವಿರೋಧಿಸಿತ್ತು. ಇದು ಹಠಾತ್ತನೇ ಭುಗಿಲೆದ್ದ ಹಿಂಸಾಚಾರವಲ್ಲ. ಬದಲಿಗೆ ಅದು ದುಷ್ಟ ಉದ್ದೇಶದಿಂದ ಕೂಡಿದ್ದ ಪೂರ್ವಯೋಜಿತ ಸಂಚಾಗಿತ್ತು ಎಂದು ವಾದಿಸಿತ್ತು.
ದಿಲ್ಲಿಗೆ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಶರ್ಜಿಲ್ ಇಮಾಮ್ ಹಾಗೂ ಇತರ ಆರೋಪಿಗಳು ಕಾನೂನುಬಾಹಿರ ಚಟುವಟಿಕೆಗಳ (ತಡೆ)ಕಾಯ್ದೆ (ಯುಎಪಿಎ) ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ 2020ರ ಫೆಬ್ರವರಿಯಲ್ಲಿ ಹೊಸದಿಲ್ಲಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಭುಗಿಲೆದ್ದ ಹಿಂಸಾಚಾರದ ಪ್ರಮುಖ ಸಂಚುಕೋರರೆಂಬ ಆರೋಪಗಳನ್ನು ಇವರ ವಿರುದ್ಧ ಹೊರಿಸಲಾಗಿದೆ. ದಿಲ್ಲಿ ಗಲಭೆಯಲ್ಲಿ 53ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.







