ಬಿಹಾರ ವಿಧಾನಸಭಾ ಚುನಾವಣೆಗೆ ಜೈಲಿನಿಂದಲೇ ಶಾರ್ಜೀಲ್ ಇಮಾಮ್ ಸ್ಪರ್ಧೆ: ವರದಿ

ಶಾರ್ಜೀಲ್ ಇಮಾಮ್ (Photo: PTI)
ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಾರ್ಜೀಲ್ ಇಮಾಮ್ ಜೈಲಿನಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಅವರ ವಕೀಲ ಅಹ್ಮದ್ ಇಬ್ರಾಹಿಂ ತಿಳಿಸಿರುವ ಬಗ್ಗೆ Scroll ವರದಿ ಮಾಡಿದೆ.
ಕಿಶನ್ಗಂಜ್ ಜಿಲ್ಲೆಯ ಬಹದ್ದೂರ್ಗಂಜ್ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಶಾರ್ಜೀಲ್ ಇಮಾಮ್ ಮುಂದಾಗಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಮುಹಮ್ಮದ್ ಅನ್ಝರ್ ನಯೀಮಿ ಶಾಸಕರಾಗಿದ್ದಾರೆ. ಅವರು 2020ರಲ್ಲಿ ನಡೆದ ಚುನಾವಣೆಯಲ್ಲಿ ಎಐಎಂಐಎಂ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಬಿಹಾರದಲ್ಲಿ ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಶಾರ್ಜೀಲ್ ಇಮಾಮ್ ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿದ್ದಾರೆ.
2019ರ ಡಿಸೆಂಬರ್ನಲ್ಲಿ ದಿಲ್ಲಿಯಲ್ಲಿ ಮತ್ತು 2020ರ ಜನವರಿಯಲ್ಲಿ ಅಲಿಘರ್, ಅಸನ್ಸೋಲ್ ಮತ್ತು ಚಕ್ಬಂದ್ನಲ್ಲಿ ಎನ್ಆರ್ಸಿ ಮತ್ತು ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದಂತೆ ಶಾರ್ಜೀಲ್ ಇಮಾಮ್ ಅವರನ್ನು ಜನವರಿ 2020ರಲ್ಲಿ ಬಂಧಿಸಲಾಗಿತ್ತು. ಇಮಾಮ್ ಅವರ ಭಾಷಣಗಳು ಮುಸ್ಲಿಂ ಸಮುದಾಯದ ಜನರನ್ನು ಪ್ರಚೋದಿಸಿದ್ದು, ಇದರಿಂದ ದಿಲ್ಲಿ ಗಲಭೆ ಸಂಭವಿಸಿತ್ತು ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿಯಲ್ಲಿ ಇಮಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇಮಾಮ್ಗೆ ಹಲವಾರು ಪ್ರಕರಣಗಳಲ್ಲಿ ಜಾಮೀನು ಮಂಜೂರಾಗಿದೆ. ಆದರೆ, ಹೆಚ್ಚುವರಿ ಆರೋಪಗಳು ಅವರ ಬಿಡುಗಡೆಗೆ ಅಡ್ಡಿಯನ್ನುಂಟುಮಾಡಿದೆ.







