ಕೇರಳ | ಶರೋನ್ ರಾಜ್ ಕೊಲೆ ಪ್ರಕರಣ : ಗೆಳತಿ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಶರೋನ್ ರಾಜ್ ಮತ್ತು ಎಸ್.ಎಸ್. ಗ್ರೀಷ್ಮಾ (Photo credit: indiatoday.in)
ತಿರುವನಂತಪುರಂ: ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆತನ ಗೆಳತಿ ಎಸ್.ಎಸ್. ಗ್ರೀಷ್ಮಾಗೆ ನೆಯ್ಯಟ್ಟಿಂಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ.
ಶರೋನ್ ರಾಜ್(23)ನನ್ನು ಕೀಟನಾಶಕ ಬೆರೆಸಿದ ಆಯುರ್ವೇದ ಕಷಾಯ ನೀಡಿ ಗ್ರೀಷ್ಮಾ ಕೊಲೆ ಮಾಡಿದ್ದಳು. ಪ್ರಕರಣದ ಮೂರನೇ ಆರೋಪಿ ಗ್ರೀಷ್ಮಾ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್ ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಪ್ರಕರಣದಲ್ಲಿ 2ನೇ ಆರೋಪಿ ಎಂದು ಹೇಳಲಾದ ಗ್ರೀಷ್ಮಾ ತಾಯಿ ಸಿಂಧುವನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ.
ಗ್ರೀಷ್ಮಾ ಶರೋನ್ ಗೆ ನಂಬಿಕೆಗೆ ದ್ರೋಹ ಮಾಡಿದ್ದಾಳೆ. ಜೀವನದ ಕೊನೆಯ ಅವಧಿಯಲ್ಲೂ ಶರೋನ್ ಗ್ರೀಷ್ಮಾಳನ್ನು ಪ್ರೀತಿಸುತ್ತಲೇ ಇದ್ದರು ಮತ್ತು ಅವಳಿಗೆ ಶಿಕ್ಷೆಯಾಗಬಾರದು ಎಂದು ಆಶಿಸಿದ್ದರು ಎಂದು ನ್ಯಾಯಾಲಯವು ತನ್ನ 586 ಪುಟಗಳ ತೀರ್ಪಿನಲ್ಲಿ ತಿಳಿಸಿದೆ. ಗ್ರೀಷ್ಮಾ ಶರೋನ್ ರನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಳು ಮತ್ತು ಆಕೆ ಕ್ರೂರ ಮತ್ತು ಹೃದಯಹೀನ ಮನಸ್ಥಿತಿಯನ್ನು ಪ್ರದರ್ಶಿಸಿದ್ದರು ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ಎತ್ತಿಹಿಡಿದಿದೆ.
ಗ್ರೀಷ್ಮಾ ನೀಡಿದ್ದ ಕೀಟ ನಾಶಕಯುಕ್ತ ಆಯುರ್ವೇದ ಕಷಾಯ ಕುಡಿದ ಕಾರಣ ಅಂಗಾಂಗ ವೈಫಲ್ಯದಿಂದ ಶರೋನ್ ರಾಜ್ ಮೃತಪಟ್ಟಿದ್ದಾರೆ. ಗ್ರೀಷ್ಮಾ ಕ್ರಮಗಳು ಇದು ಪೂರ್ವನಿಯೋಜಿತ ಕೊಲೆ ಎಂದು ಸೂಚಿಸುತ್ತವೆ ಎಂದು ನ್ಯಾಯಾಲಯ ತೀರ್ಪಿನ ವೇಳೆ ಹೇಳಿದೆ.
ಗ್ರೀಷ್ಮಾ ವಿರುದ್ಧ 48 ಸಾಂದರ್ಭಿಕ ಸಾಕ್ಷ್ಯಗಳನ್ನು ನ್ಯಾಯಾಲಯ ಉಲ್ಲೇಖಿಸಿದ್ದು, ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸಲು ಯಾವುದೇ ಅಡೆತಡೆಗಳಿಲ್ಲ ಎಂದು ಹೇಳಿದೆ. ಗ್ರೀಷ್ಮಾಳ ಆತ್ಮಹತ್ಯೆ ಯತ್ನವು ತನಿಖೆಯನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿತ್ತು. ಅವಳು ಹಂತ ಹಂತವಾಗಿ ಕೊಲೆಯನ್ನು ಯೋಜಿಸಿದ್ದಳು. ಗ್ರೀಷ್ಮಾ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.
ಶರೋನ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಆರೋಪಿ ಎಸ್.ಎಸ್. ಗ್ರೀಷ್ಮಾ(24) ಮತ್ತು ಮೂರನೇ ಆರೋಪಿ ನಿರ್ಮಲಕುಮಾರನ್ ನಾಯರ್ ಅವರನ್ನು ನ್ಯಾಯಾಲಯ ಶುಕ್ರವಾರ ತಪ್ಪಿತಸ್ಥರೆಂದು ಘೋಷಿಸಿತ್ತು.







