ಶಶಿ ತರೂರ್ ಬಿಜೆಪಿಯ ಸೂಪರ್ ವಕ್ತಾರ ಆಗಿದ್ದಾರೆ: ಕಾಂಗ್ರೆಸ್

ಶಶಿ ತರೂರ್ | PTI
ಹೊಸದಿಲ್ಲಿ : ಪಾಕಿಸ್ತಾನದ ವಿರುದ್ಧ ಭಾರತ ನಡೆಸಿರುವ ‘ಆಪರೇಶನ್ ಸಿಂಧೂರ’ ಸೇನಾ ಕಾರ್ಯಾಚರಣೆ ಬಗ್ಗೆ ಜಾಗತಿಕ ಸಮುದಾಯಕ್ಕೆ ವಿವರಣೆ ನೀಡಲು ಹೋಗಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಪಾಕಿಸ್ತಾನ ಮತ್ತು ಭಯೋತ್ಪಾದಕ ಗುಂಪುಗಳಿಗೆ ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ.
ಆದರೆ, ಅವರು ನೀಡುತ್ತಿರುವ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷದಿಂದ ಆಕ್ಷೇಪ ವ್ಯಕ್ತವಾಗಿದೆ. ಶಶಿ ತರೂರ್ ಈಗ ‘‘ಬಿಜೆಪಿಯ ಸೂಪರ್ ವಕ್ತಾರ’’ ಆಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರವನ್ನು ಬೆಂಬಲಿಸಿ ಅವರು ನೀಡುತ್ತಿರುವ ಹೇಳಿಕೆಗಳಿಂದ ಸ್ವತಃ ಬಿಜೆಪಿ ನಾಯಕರೇ ನಾಚಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಸೂಪರ್ ವಕ್ತಾರರಾಗಿದ್ದಾರೆ. ಪ್ರಧಾನಿ ಮೋದಿ ಮತ್ತು ಸರಕಾರದ ಪರವಾಗಿ ಬಿಜೆಪಿ ನಾಯಕರು ಹೇಳದಿರುವುದನ್ನೂ ಅವರು ಹೇಳುತ್ತಿದ್ದಾರೆ. ಹಿಂದಿನ ಸರಕಾರಗಳು ಏನು ಮಾಡುತ್ತಿದ್ದವು ಎನ್ನುವುದಾದರೂ ಅವರಿಗೆ ಗೊತ್ತೇ? ಕೇಂದ್ರ ಸರಕಾರವು ಭಾರತೀಯ ಸಶಸ್ತ್ರ ಪಡೆಗಳ ಯಶಸ್ಸಿನ ಲಾಭವನ್ನು ಪಡೆದುಕೊಳ್ಳುತ್ತಿದೆ’’ ಎಂದು ರಾಜ್ ಹೇಳಿದರು.
ಇತ್ತೀಚೆಗೆ ಪನಾಮದಲ್ಲಿ ಭಾರತೀಯ ರಾಯಭಾರ ಕಚೇರಿಯಲ್ಲಿ ಮಾತನಾಡಿದ ತರೂರ್, ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕರ ವಿರುದ್ಧ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
‘‘ಇತ್ತೀಚಿನ ವರ್ಷಗಳಲ್ಲಿ ಯಾವ ಬದಲಾವಣೆ ಆಗಿದೆಯೆಂದರೆ, ತಾವು ಕೂಡ ಬೆಲೆ ತೆರಬೇಕಾಗುತ್ತದೆ ಎನ್ನುವುದನ್ನು ಭಯೋತ್ಪಾದಕರೂ ಅರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ’’ ಎಂದು ಕಾಂಗ್ರೆಸ್ ಸಂಸದ ಹೇಳಿದ್ದಾರೆ.







