ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಜೊತೆ ನನಗೆ ಭಿನ್ನಾಭಿಪ್ರಾಯವಿದೆ: ಶಶಿ ತರೂರ್

ಶಶಿ ತರೂರ್ | PC : PTI
ತಿರುವನಂತಪುರಂ: ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಜೊತೆ ಭಿನ್ನಾಭಿಪ್ರಾಯಗಳಿದೆ. ಆದರೆ, ನಿಲಂಬೂರ್ ಕ್ಷೇತ್ರದ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವುಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶಶಿ ತರೂರ್ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಶಶಿ ತರೂರ್, ಕಾಂಗ್ರೆಸ್, ಅದರ ಮೌಲ್ಯಗಳು ಮತ್ತು ಪಕ್ಷದ ಕಾರ್ಯಕರ್ತರು ನನಗೆ ಬಹಳ ಪ್ರಿಯರು. 16 ವರ್ಷಗಳಿಂದ ಪಕ್ಷದ ಕಾರ್ಯಕರ್ತರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇನೆ ಮತ್ತು ಅವರನ್ನು ಆಪ್ತ ಸ್ನೇಹಿತರು ಮತ್ತು ಸಹೋದರರಂತೆ ನೋಡುತ್ತೇನೆ ಎಂದು ಹೇಳಿದರು.
ಕೆಲ ಕಾಂಗ್ರೆಸ್ ನಾಯಕರ ಜೊತೆ ನನಗೆ ಭಿನ್ನಾಭಿಪ್ರಾಯಗಳಿವೆ. ನಾನು ಏನು ಮಾತನಾಡುತ್ತಿದ್ದೇನೆಂದು ನಿಮಗೆ ತಿಳಿದಿದೆ, ಏಕೆಂದರೆ ಆ ಕೆಲವು ಸಮಸ್ಯೆಗಳು ಸಾರ್ವಜನಿಕ ವಲಯದಲ್ಲಿವೆ ಮತ್ತು ಮಾಧ್ಯಮಗಳು ವರದಿ ಮಾಡಿವೆ ಎಂದು ತರೂರ್ ಹೇಳಿದರು.
ಭಿನ್ನಾಭಿಪ್ರಾಯಗಳು ರಾಷ್ಟ್ರೀಯ ನಾಯಕರ ಜೊತೆಯೇ ಅಥವಾ ರಾಜ್ಯ ನಾಯಕರೊಂದಿಗೆಯೇ ಎಂಬುದನ್ನು ಶಶಿ ತರೂರ್ ಸ್ಪಷ್ಟಪಡಿಸಲಿಲ್ಲ. ಉಪಚುನಾವಣೆಯ ಫಲಿತಾಂಶಗಳ ನಂತರ ಈ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಉಪಚುನಾವಣೆ ಪ್ರಚಾರದಲ್ಲಿ ಏಕೆ ಭಾಗಿಯಾಗಿಲ್ಲ ಎಂದು ಕೇಳಿದಾಗ, ಆಹ್ವಾನವಿಲ್ಲದ ಸ್ಥಳಕ್ಕೆ ನಾನು ಹೋಗುವುದಿಲ್ಲ. ಆದರೆ, ಪಕ್ಷದ ಕಾರ್ಯಕರ್ತರ ಪ್ರಚಾರ ಪ್ರಯತ್ನಗಳು ಫಲ ನೀಡಬೇಕೆಂದು ಮತ್ತು ನಿಲಂಬೂರಿನಿಂದ ಯುಡಿಎಫ್ ಅಭ್ಯರ್ಥಿ ಗೆಲ್ಲಬೇಕೆಂದು ನಾನು ಬಯಸುತ್ತೇನೆ ಎಂದು ಶಶಿ ತರೂರ್ ಹೇಳಿದರು.







