ಪತಿಯ ಹುಟ್ಟು ಹಬ್ಬ ಆಚರಿಸಲು ಲಂಡನ್ಗೆ ತೆರಳುತ್ತಿದ್ದ ಬೆಂಗಳೂರಿನ ಟೆಕ್ಕಿಯೂ ವಿಮಾನ ದುರಂತದಲ್ಲಿ ಮೃತ್ಯು

Photo credit: PTI
ಇಂದೋರ್: ಅಹ್ಮದಾಬಾದ್ ವಿಮಾನ ದುರಂತ ಭಾರತದ ಭೀಕರ ವಿಮಾನ ದುರಂತಗಳಲ್ಲಿ ಒಂದಾಗಿದೆ. ಈ ದುರಂತದಲ್ಲಿ ಪ್ರಯಾಣಿಕರು, ಸಿಬ್ಬಂದಿಗಳು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 274 ಮಂದಿ ಮೃತಪಟ್ಟಿದ್ದಾರೆ. ಮೃತ ಒಬ್ಬಬ್ಬರದ್ದು ಒಂದೊಂದು ಕಥೆಯಾಗಿದೆ. ಹತ್ತಾರು ಕನಸುಗಳನ್ನು ಕಟ್ಟಿಕೊಂಡು ವಿಮಾನ ಹತ್ತಿದವರು ಕ್ಷಣ ಮಾತ್ರದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಇಂದೋರ್ನ ಹರ್ಪ್ರೀತ್ (28) ಕಥೆಯು ಇದೆ ರೀತಿಯದ್ದಾಗಿದೆ. ಬೆಂಗಳೂರಿನ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹರ್ಪ್ರೀತ್ ಪತಿಯ ಹುಟ್ಟುಹಬ್ಬವನ್ನುಆಚರಿಸಲು ಲಂಡನ್ಗೆ ತೆರಳುತ್ತಿದ್ದರು. ಪತಿ ರಾಬಿ ಹೊರಾ ಕೂಡ ಹರ್ಪ್ರೀತ್ ಆಗಮನಕ್ಕಾಗಿ ಲಂಡನ್ನಲ್ಲಿ ಕಾಯುತ್ತಿದ್ದರು.
ಹರ್ಪ್ರೀತ್ ಜೂನ್ 19ರಂದು ಲಂಡನ್ಗೆ ಪ್ರಯಾಣಿಸಲು ಮೊದಲು ಯೋಜನೆ ಹಾಕಿದ್ದರು. ಆದರೆ ಪತಿಯ ಹುಟ್ಟುಹಬ್ಬದ ಹಿನ್ನೆಲೆ ಜೂನ್ 12ಕ್ಕೆ ಪ್ರಯಾಣವನ್ನು ಮರು ನಿಗದಿ ಮಾಡಿದ್ದರು. ಹರ್ಪ್ರೀತ್ ಬೆಂಗಳೂರಿನಿಂದ ಲಂಡನ್ಗೆ ತೆರಳಲು ಯೋಜಿಸಿದ್ದರು. ಆದರೆ, ತಂದೆಗೆ ಹೃದಯ ಶಸ್ತ್ರಚಿಕಿತ್ಸೆಯಾಗಿರುವ ಕಾರಣ ಅವರ ಆರೋಗ್ಯ ವಿಚಾರಿಸಿದ ಬಳಿಕ ಅಹ್ಮದಾಬಾದ್ ಮೂಲಕ ಲಂಡನ್ಗೆ ತೆರಳುವುದಕ್ಕಾಗಿ ಏರ್ ಇಂಡಿಯಾ ವಿಮಾನವನ್ನು ಬುಕ್ ಮಾಡಿದ್ದರು.
ʼಜೂನ್ 19ರಂದು ಲಂಡನ್ಗೆ ಹೋಗಲು ಅವಳು ಯೋಜನೆ ಹಾಕಿಕೊಂಡಿದ್ದಳು. ರಾಬಿಯ ಹುಟ್ಟುಹಬ್ಬದ ಹಿನ್ನೆಲೆ ತನ್ನ ಯೋಜನೆಯನ್ನು ಬದಲಿಸಿದಳು. ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದಳು. ದಂಪತಿ ಯುರೋಪ್ ಪ್ರವಾಸದ ಯೋಜನೆಯನ್ನೂ ಹಾಕಿದ್ದರು. ಎಲ್ಲವೂ ಕೆಲವೇ ಕೆಲವು ಸೆಕೆಂಡುಗಳಲ್ಲಿ ಬದಲಾಗಿ ಹೋಯಿತು’ ಎಂದು ಹರ್ಪ್ರೀತ್ ಸಹೋದರ ರಾಜೇಂದ್ರ ಸಿಂಗ್ ಹೇಳಿದರು.
ಹರ್ಪ್ರೀತ್ ಲಂಡನ್ಗೆ ಹೋಗುವ ಮೊದಲು ಅಹ್ಮದಾಬಾದ್ನಲ್ಲಿರುವ ತನ್ನ ಹೆತ್ತವರನ್ನು ಭೇಟಿ ಮಾಡಿದ್ದನ್ನು ಅವರ ಸಂಬಂಧಿಯೋರ್ವರು ನೆನಪಿಸಿಕೊಂಡಿದ್ದಾರೆ. ‘ಅವಳು ವಿಮಾನ ಹತ್ತುವ ಮೊದಲು, ವಾಟ್ಸಾಪ್ ಗುಂಪಿನಲ್ಲಿ ನಾವೆಲ್ಲರೂ ಅವಳಿಗೆ ಶುಭ ಹಾರೈಸಿದೆವು. ಅವಳು ಎಲ್ಲರಿಗೂ ಧನ್ಯವಾದ ಹೇಳಿದ್ದಳು. ಆಕೆ ತುಂಬಾ ಖುಷಿಯಲ್ಲಿದ್ದಳು. ಆದರೆ ವಿಮಾನ ಹಾರಿದ ಕೆಲವೇ ಕ್ಷಣಗಳಲ್ಲಿ ಎಲ್ಲವೂ ಬದಲಾಯಿತು. ನಾವು ಆಕೆಯನ್ನು ಕಳೆದುಕೊಂಡೆವು’ ಎಂದು ಹೇಳಿದ್ದಾರೆ.







