ಹೃದಯಘಾತವಾದರೂ ಬಸ್ ನಿಲ್ಲಿಸಿ 60 ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ ಶೇಖ್ ಆಖ್ತರ್
ಒಡಿಶಾದ ಬಾಲಸೋರ್ ಪಂಚಲಿಂಗೇಶ್ವರ ದೇವಾಲಯಕ್ಕೆ ತೆರಳುತ್ತಿದ್ದಾಗ ನಡೆದ ಘಟನೆ
ಬಾಲಸೋರ್ : ಬಸ್ ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾದ ಚಾಲಕನೊಬ್ಬ ಹೃದಯಘಾತಕ್ಕೊಳಗಾದರೂ, ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸುವ ಮೂಲಕ 60ಕ್ಕೂ ಅಧಿಕ ಪ್ರಯಾಣಿಕರ ಪ್ರಾಣವನ್ನು ಉಳಿಸಿದ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಪಾಟಪುರ ಛಾಕ್ನಲ್ಲಿ ಮಂಗಳವಾರ ಮುಂಜಾನೆ ಈ ಘಟನೆ ನಡೆದಿದೆ. ಪಶ್ಚಿಮಬಂಗಾಳದಿಂದ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಸ್, ಅದೇ ಜಿಲ್ಲೆಯ ಪಂಚಲಿಂಗೇಶ್ವರ ದೇವಾಲಯಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಬಸ್ ಚಲಾಯಿಸುತ್ತಿದ್ದಾಗ ಚಾಲಕ ಶೇಖ್ ಆಖ್ತರ್ಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆತ ಬಸ್ಸನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ, ಪ್ರಜ್ಞಾಹೀನನಾಗಿದ್ದರು ಎನ್ನಲಾಗಿದೆ.
ಗಾಬರಿಗೊಂಡ ಪ್ರಯಾಣಿಕರು ಸ್ಥಳೀಯ ಜನರ ಸಹಾಯದಿಂದ ಶೇಖ್ ಆಖ್ತರ್ ರನ್ನು ಸಮೀಪದ ನೀಲಗಿರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರೆಂದು ಪೊಲೀಸರು ಹೇಳಿದ್ದಾರೆ.
ಚಾಲಕ ಶೇಖ್ ಆಖ್ತರ್ ಹಠಾತ್ತನೇ ಅಸ್ವಸ್ಥರಾಗಿದ್ದು, ಆತ ತಡಮಾಡದೆ ಬಸ್ ನಿಲ್ಲಿಸಿದರು. ರಸ್ತೆಯ ಒಂದು ಬದಿಯಲ್ಲಿ ಬಸ್ ನಿಂತ ಕೂಡಲೇ ಆತ ಕುಸಿದುಬಿದ್ದರೆಂದು ಬಸ್ ಪ್ರಯಾಣಿಕರಲ್ಲೊಬ್ಬರಾದ ಅಮಿತ್ ದಾಸ್ ತಿಳಿಸಿದ್ದಾರೆ.
ತೀವ್ರ ಅಸ್ವಸ್ಥರಾದರೂ ತನ್ನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಜೀವವನ್ನು ಉಳಿಸಿದ ಶೇಖ್ ಆಖ್ತರ್ನ ಸಮಯ ಪ್ರಜ್ಞೆಯನ್ನು ಪ್ರಯಾಣಿಕರು ಹಾಗೂ ಸ್ಥಳೀಯ ನಾಗರಿಕರು ಪ್ರಶಂಸಿಸಿದ್ದಾರೆ.