ನ್ಯಾಯಾಂಗ ನಿಂದನೆ; ಶೇಖ್ ಹಸೀನಾಗೆ 6 ತಿಂಗಳು ಜೈಲು ಶಿಕ್ಷೆ

ಶೇಖ್ ಹಸೀನಾ | PC : PTI
ಹೊಸದಿಲ್ಲಿ: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಮಂಗಳವಾರ ಬುಧವಾರ ಬಾಂಗ್ಲಾದ ನ್ಯಾಯಾಲಯ ಆರು ತಿಂಗಳುಗಳ ಜೈಲು ಶಿಕ್ಷೆಯನ್ನು ಘೋಷಿಸಿದೆ. ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಗುಲಾಮ್ ಮುರ್ತಾಝಾ ಮುಜುಂದಾರ್ ನೇತೃತ್ವದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣ-1(ಐಸಿಟಿ) ಈ ತೀರ್ಪನ್ನು ಪ್ರಕಟಿಸಿದೆ.
ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣದ ಬಗ್ಗೆ ಹಸೀನಾ ನೀಡಿದ್ದಾರೆನ್ನಲಾದ ಕೆಲವು ಹೇಳಿಕೆಗಳು ನ್ಯಾಯಾಧೀಕರಣದ ಘನತೆ ಹಾಗೂ ಅಧಿಕಾರವನ್ನು ದುರ್ಬಲಗೊಳಿಸುವಂತಿವೆ ಎಂದು ನ್ಯಾಯಾಧೀಶರು ಬಾಂಗ್ಲಾದ ಪದಚ್ಯುತ ಪ್ರಧಾನಿಗೆ ಶಿಕ್ಷೆಯನ್ನು ಪ್ರಕಟಿಸುತ್ತಾ ತಿಳಿಸಿದರು.
1971ರ ಬಾಂಗ್ಲಾ ವಿಮೋಚನಾ ಸಮರದಲ್ಲಿ ಯುದ್ಧಪರಾಧಗಳನ್ನು ಎಸಗಿದ ವ್ಯಕ್ತಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಕ್ಕಾಗಿ ಶೇಖ್ ಹಸೀನಾ ಸರಕಾರವು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಧೀಕರಣವನ್ನು ಸ್ಥಾಪಿಸಿತ್ತು. ಆದಾಗ್ಯೂ, ಕಳೆದ ವರ್ಷ ನಡೆದ ವಿದ್ಯಾರ್ಥಿ ಬಂಡಾಯದ ಬಳಿಕ ಅವರು ಬಾಂಗ್ಲಾದಿಂದ ಪರಾರಿಯಾಗಿ, ಭಾರತದಲ್ಲಿ ಆಶ್ರಯ ಪಡೆದ ಬಳಿಕ, ಮೊಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರವು ಐಸಿಟಿಗೆ ಹಲವಾರು ತಿದ್ದುಪಡಿಗಳನ್ನು ತಂದಿತ್ತು ಹಾಗೂ ಹೊಸತಾಗಿ ಸಮಿತಿಗಳನ್ನು, ನ್ಯಾಯಪೀಠಗಳನ್ನು ಹಾಗೂ ಮುಖ್ಯ ಪ್ರಾಸಿಕ್ಯೂಟರ್ ಅವರನ್ನು ನೇಮಿಸಿತ್ತು.
ಇಂದು ಪ್ರಕಟಿಸಲಾದ ಶಿಕ್ಷೆಯು, ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ಕೈಗೊಳ್ಳಲಾದ ಮೊದಲ ಕಾನೂನು ಕ್ರಮವಾಗಿದೆ.
ಹಸೀನಾ ಅವರ ವಿರುದ್ಧ ಸಾಮೂಹಿಕ ನರಮೇಧಕ್ಕೆ ಪ್ರಚೋದನೆ, ಸಹಕಾರ,ಶಾಮೀಲು,ಸಂಚು ಮತ್ತು ಹತ್ಯಾಕಾಂಡ ತಡೆಯುವಲ್ಲಿ ವೈಫಲ್ಯ ಸೇರಿದಂತೆ ಐದು ಆರೋಪಗಳನ್ನು ಪ್ರಾಸಿಕ್ಯೂಟರ್ಗಳು ಹೊರಿಸಿದ್ದು, ಇದು ಬಾಂಗ್ಲಾದೇಶದ ಕಾನೂನಿನಡಿಯಲ್ಲಿ ಮಾನವತೆಯ ವಿರುದ್ದ ಅಪರಾಧವೆಂದು ಪರಿಗಣಿಸಲಾಗುತ್ತದೆ.
ಶೇಖ್ ಹಸೀನಾ ಅವರಿಗೆ ಐಸಿಟಿ ಶಿಕ್ಷೆ ಘೋಷಿಸಿರುವುದನ್ನು ಅವರ ನೇತೃತ್ವದ ಪಕ್ಷವಾದ ನಿಷೇಧಿತ ಅವಾಮಿಲೀಗ್ ಖಂಡಿಸಿದೆ. ಲಂಡನ್ ನಿಂದ ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷವು ಇದೊಂದು ಡಂಭಾಚಾರದ ವಿಚಾರಣೆಯಾಗಿದೆ ಹಾಗೂ ಆರೋಪಿಗಳು ತಮ್ಮ ಮೇಲೆ ಹೊರಿಸಲಾದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆಂದು ಅದು ಹೇಳಿದೆ.
ವಿಚಾರಣೆಯ ನೆಪದಲ್ಲಿ ಸಾವಿರಾರು ಮಂದಿಯ ವಿರುದ್ಧ ಸುಳ್ಳು ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಮಾನವಹಕ್ಕುಗಳ ಮೂಲಭೂತ ತತ್ವಗಳನ್ನು ಉಲ್ಲಂಘಿಸಿ ಸಾರಾಸಗಟಾಗಿ ಬಂಧನಗಳು ನಡೆಯುತ್ತಿವೆ ಎಂದು ಅವಾಮಿ ಲೀಗ್ ಆಪಾದಿಸಿದೆ.
ಯೂನುಸ್ ಅವರನ್ನು ಅಧಿಕಾರಕ್ಕೆ ತರುವುದಕ್ಕಾಗಿ ಹಿಂಸಾಚಾರವೆಸಗಿದ ಹಾಗೂ ಪೊಲೀಸರನ್ನು ಕೊಲೆಗೈದ ವ್ಯಕ್ತಿಗಳಿಗೆ ಸಾಮೂಹಿಕವಾಗಿ ಕ್ಷಮಾದಾನ ನೀಡಲಾಗಿದೆಯೆಂದು ಅವಾಮಿ ಲೀಗ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇನ್ನೊಂದು ಹೇಳಿಕೆಯಲ್ಲಿ ತಿಳಿಸಿದೆ.







