ಶೇಖ್ ಹಸೀನಾರ ಮತದಾರರ ಚೀಟಿಯನ್ನು ಅಮಾನತುಗೊಳಿಸಿದ ಬಾಂಗ್ಲಾದೇಶ ಚುನಾವಣಾ ಆಯೋಗ

ಶೇಖ್ ಹಸೀನಾ | PC : PTI
ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾರ ರಾಷ್ಟ್ರೀಯ ಗುರುತಿನ ಚೀಟಿಯನ್ನು ಅಮಾನತುಗೊಳಿಸಿರುವುದಾಗಿ ಬುಧವಾರ ಬಾಂಗ್ಲಾದೇಶ ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ, ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಮತದಾನದ ವಂಚಿತರಾಗಲಿದ್ದಾರೆ.
“ಯಾರದ್ದಾದರೂ ರಾಷ್ಟ್ರೀಯ ಗುರುತಿನ ಚೀಟಿಯನ್ನು ಅಮಾನತುಗೊಳಿಸಿದರೆ, ಅಂಥವರು ವಿದೇಶದಿಂದ ಮತ ಚಲಾಯಿಸಲು ಆಗದು. ಹಸೀನಾರ ರಾಷ್ಟ್ರೀಯ ಗುರುತಿನ ಚೀಟಿಯನ್ನು ಅಮಾನತುಗೊಳಿಸಲಾಗಿದೆ” ಎಂದು ಚುನಾವಣಾ ಆಯೋಗದ ಕಾರ್ಯದರ್ಶಿ ಅಖ್ತರ್ ಅಹಮದ್ ಹೇಳಿದ್ದಾರೆ.
“ಹಸೀನಾರ ತಂಗಿ ಶೇಖ್ ರೆಹಾನಾ, ಪುತ್ರ ಸಜೀದ್ ವಾಜೆದ್ ಜಾಯ್ ಹಾಗೂ ಪುತ್ರಿ ಸಮಿಯಾ ಅವರ ಗುರುತಿನ ಚೀಟಿಯನ್ನೂ ಅಮಾನತುಗೊಳಿಸಲಾಗಿದೆ” ಎಂದು ಹೆಸರು ಹೇಳಲು ಇಚ್ಛಿಸದ ಚುನಾವಣಾಧಿಕಾರಿಯನ್ನು ಉಲ್ಲೇಖಿಸಿ ‘ಢಾಕಾ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
ಇದರೊಂದಿಗೆ, ರೆಹಾನಾ ಅವರ ಮಕ್ಕಳಾದ ತುಲಿಪ್ ರಿಜ್ವಾನಾ ಸಿದ್ದೀಕ್, ಅಜ್ಮಿನಾ ಸಿದ್ದೀಕ್ ಹಾಗೂ ಸೋದರಳಿಯ ರದ್ವಾನ್ ಮುಜೀಬ್ ಸಿದ್ದೀಕ್ ಬಾಬಿ, ಅವರ ಸೋದರ ಮಾವ ಮತ್ತು ಹಸೀನಾರ ಮಾಜಿ ಭದ್ರತಾ ಸಲಹೆಗಾರ ನಿವೃತ್ತ ಮೇಜರ್ ಜನರಲ್ ತಾರಿಕ್ ಅಹ್ಮದ್ ಸಿದ್ದೀಕ್, ಅವರ ಪತ್ನಿ ಶಾಹಿನ್ ಸಿದ್ದೀಕ್ ಮತ್ತು ಅವರ ಪುತ್ರಿ ಬುಶ್ರಾ ಸಿದ್ದೀಕ್ ಅವರ ಗುರುತಿನ ಚೀಟಿಗಳನ್ನೂ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.







