ಸಂಜೂಲಿ ಮಸೀದಿ ಕೆಡವಲು ಶಿಮ್ಲಾ ಪಾಲಿಕೆ ಆಯುಕ್ತರ ಕೋರ್ಟ್ ಆದೇಶ

PC: x.com/TimesAlgebraIND
ಶಿಮ್ಲಾ: ಸಂಜೂಲಿ ಮಸೀದಿಯ ಎಲ್ಲ ಐದು ಮಹಡಿಗಳು ಅನಧಿಕೃತವಾಗಿದ್ದು, ಇಡೀ ಕಟ್ಟಡವನ್ನು ಕೆಡವಲು ಶಿಮ್ಲಾ ಪಾಲಿಕೆ ಆಯುಕ್ತರ ನ್ಯಾಯಾಲಯ ಶನಿವಾರ ಆದೇಶ ನೀಡಿದೆ ಎಂದು ವಕೀಲರು ಹೇಳಿದ್ದಾರೆ. ಮಸೀದಿಯನ್ನು ಕೆಡವಲು ಆಗ್ರಹಿಸಿ ಕೆಲ ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಹೋರಾಟ ನಡೆಸಿದ್ದವು. ಇದು ಅನಧಿಕೃತ ನಿರ್ಮಾಣ ಎಂದು ಆಪಾದಿಸಿ ಕೆಡವಲು ಆಗ್ರಹಿಸಿದ್ದರೂ, ಕಳೆದ 15 ವರ್ಷಗಳಿಂದ ಪಾಲಿಕೆ ಕ್ರಮ ಕೈಗೊಂಡಿರಲಿಲ್ಲ.
2024ರ ಅಕ್ಟೋಬರ್ 5ರಂದು ನ್ಯಾಯಾಲಯ ಈ ಮಸೀದಿಯ ಮೇಲಿನ ಮೂರು ಮಹಡಿಗಳನ್ನು ಕೆಡವಲು ಆದೇಶ ನೀಡಿತ್ತು ಮತ್ತು ಉಳಿದ ಎರಡು ಮಹಡಿಗಳ ಅನುಮೋದಿತ ಪ್ಲಾನ್ ಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ವಕ್ಫ್ ಮಂಡಳಿಗೆ ಆದೇಶ ನೀಡಿತ್ತು.
ಮಸೀದಿ ಕಟ್ಟಡ ಇರುವ ಭೂಮಿಯ ದಾಖಲೆಗಳನ್ನು ಮತ್ತು ಅನುಮೋದಿತ ನಿರ್ಮಾಣ ಪ್ಲಾನ್ ಪ್ರಸ್ತುತಪಡಿಸಲು ವಕ್ಫ್ ಮಂಡಳಿ ವಿಫಲವಾಗಿದೆ ಎಂದು ಮಸೀದಿ ಕೆಡವಲು ಆಗ್ರಹಿಸಿದ್ದ ಸ್ಥಳೀಯರ ಪರವಾಗಿ ವಕಾಲತ್ತು ಮಾಡಿದ್ದ ಜಗತ್ ಪಾಲ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಭೂಪೇಂದ್ರ ಅತ್ರಿ, ಮಸೀದಿ ಕೆಡವಲು ಆದೇಶ ನೀಡಿದ್ದಾರೆ ಎಂದು ಪಾಲ್ ವಿವರಿಸಿದ್ದಾರೆ.
ಇದಕ್ಕೂ ಮುನ್ನ ವಾದ- ಪ್ರತಿವಾದಗಳನ್ನು ಆಲಿಸಿದ ಹಿಮಾಚಲ ಪ್ರದೇಶ ಹೈಕೋರ್ಟ್, ಈ ಪ್ರಕರಣವನ್ನು ಮೂರು ತಿಂಗಳ ಒಳಗಾಗಿ ಅಂದರೆ ಮೇ 9ರ ಒಳಗಾಗಿ ಇತ್ಯರ್ಥಪಡಿಸುವಂತೆ ಪಾಲಿಕೆ ಆಯುಕ್ತರ ಕೋರ್ಟ್ಗೆ ನಿರ್ದೇಶನ ನೀಡಿತ್ತು.
ಈ ಮಸೀದಿಯನ್ನು 1947ಕ್ಕೆ ಮುನ್ನ ನಿರ್ಮಿಸಲಾಗಿದ್ದು, ಹಳೆಯ ಮಸೀದಿಯನ್ನು ಕೆಡವಿದ ಬಳಿಕ ಹೊಸ ಮಸೀದಿ ನಿರ್ಮಿಸಲಾಗಿದೆ ಎಂದು ವಕ್ಫ್ ಮಮಡಳಿ ಪರ ವಕೀಲ ವಾದ ಮಂಡಿಸಿದ್ದರು.
ಆಯುಕ್ತರ ಆದೇಶದ ಅನ್ವಯ ಮೂರು ಅನಧಿಕೃತ ಮಹಡಿಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆ ಆರಂಭವಾಗಿದ್ದು, ಮಸೀದಿಯ ಮೇಲ್ಛಾವಣಿ ಮತ್ತು ನಾಲ್ಕನೇ ಮಹಡಿಯಲ್ಲಿರುವ ಎರಡು ಶೌಚಾಯಗಳು, ಎರಡು ಮಹಡಿಗಳ ಗೋಡೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಇದೀಗ ಇಡೀ ಕಟ್ಟಡ ಧ್ವಂಸಕ್ಕೆ ಆದೇಶ ನೀಡಲಾಗಿದೆ.







