ಸಿಎಂ ಹುದ್ದೆ ಮೇಲೆ ಅಜಿತ್ ಪವಾರ್ ಕಣ್ಣು: ಶಿಂಧೆ ಬಣದಲ್ಲಿ ತಲ್ಲಣ
ಅಜಿತ್ ಪವಾರ್ (PTI)
ಮುಂಬೈ: ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣವು ಎನ್ಡಿಎ ಜೊತೆ ಕೈ ಜೋಡಿಸಿದಂದಿನಿಂದ ಸಿಎಂ ಏಕನಾಥ್ ಶಿಂಧೆ ಬಣದಲ್ಲಿ ಅಸಮಾಧಾನ ಮೂಡಿದೆ ಎನ್ನಲಾಗಿದೆ.
ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ (ಎನ್ಸಿಪಿ) ಪಕ್ಷದೊಂದಿಗೆ ಎಂದಿಗೂ ಸಂಬಂಧ ಹೊಂದಲು ಬಯಸಿರಲಿಲ್ಲ ಎಂದು ಶಿವಸೇನೆ (ಶಿಂಧೆ ಬಣದ) ಶಾಸಕರು ಮೈತ್ರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉದ್ಧವ್ ಠಾಕ್ರೆ ಎನ್ಸಿಪಿ ಜೊತೆ ಮೈತ್ರಿ ಮಾಡಿದ್ದಾರೆ ಎಂಬ ಕಾರಣ ನೀಡಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವನ್ನು ಶಿಂಧೆ ಬಣ ತೊರೆದು ಬಿಜೆಪಿ ಜೊತೆ ಸೇರಿತ್ತು.
ಸೈದ್ಧಾಂತಿಕ ಕಾರಣ ಮಾತ್ರವಲ್ಲದೆ, ಅಧಿಕಾರ ಹಂಚಿಕೆ ವಿಷಯವಾಗಿಯೂ ಶಿಂಧೆ ಬಣದ ಶಾಸಕರಲ್ಲಿ ಅಜಿತ್ ಪವಾರ್ ತಂಡದ ಆಗಮನವು ಅಸಮಾಧಾನ ತಂದಿದೆ. ಅಜಿತ್ ಪವಾರ್ ಅವರು ಮುಖ್ಯಮಂತ್ರಿ ಹುದ್ದೆ ಮೇಲೆ ಆಸೆ ವ್ಯಕ್ತಪಡಿಸಿದ್ದು, ಇದು ಶಿಂಧೆ ಬಣದಲ್ಲಿ ತೀವ್ರ ತಳಮಳ ಉಂಟು ಮಾಡಿದೆ.
ತಮ್ಮ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಅಜಿತ್ ಪವಾರ್, “ನಾನು ಐದು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೆ. ನನಗೂ ರಾಜ್ಯವನ್ನು ಮುನ್ನಡೆಸಬೇಕು ಮತ್ತು ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ” ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಅವರು ಅಜಿತ್ ಪವಾರ್ ಅವರನ್ನು ಮುಂದಿನ ಸಿಎಂ ಮಾಡಬಹುದು ಎನ್ನುವ ಅಂದಾಜು ಮಾಡಿದ್ದಾರೆ. ಏಕನಾಥ್ ಶಿಂಧೆಗಿಂತ ಅಜಿತ್ ಪವಾರ್ ಮೇಲೆ ದೆಹಲಿಯವರಿಗೆ ನಂಬಿಕೆ ಇರುವುದರಿಂದ ಅಜಿತ್ ಪವಾರ್ ರನ್ನು ಸಿಎಂ ಆಗಿ ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ.
ಈ ನಡುವೆ, ಎನ್ಸಿಪಿ ನಾಯಕ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ರಾಜ್ಯ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರು ಬಂಡಾಯವೆದ್ದಿದ್ದಾರೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣದ) ಸಂಸದ ವಿನಾಯಕ್ ರಾವುತ್ ಹೇಳಿದ್ದಾರೆ.
(ಏಕನಾಥ್ ಶಿಂಧೆ ಬಣದ) ಕೆಲವು ಶಾಸಕರು ʼಮಾತೋಶ್ರೀʼಯಿಂದ ಕ್ಷಮೆ ಕೇಳಲು ಬಯಸುವುದಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. 'ಮಾತೋಶ್ರೀ' ಯಿಂದ ಕರೆ ಬಂದರೆ ಅದಕ್ಕೆ ಅವರು ಸಕಾರಾತ್ಮಕವಾಗಿ ಉತ್ತರಿಸುತ್ತಾರೆ ಎಂದು ಶಿಂಧೆ ಬಣದ ಅನೇಕ ಶಾಸಕರು ಹೇಳಿದ್ದಾರೆ ಎಂದು ವಿನಾಯಕ ರಾವತ್ ಹೇಳಿದ್ದಾರೆ.
“ಅಜಿತ್ ದಾದಾ (ಪವಾರ್) ಸರ್ಕಾರಕ್ಕೆ ಸೇರಿದ ಬಳಿಕ, ಶಿಂಧೆ ಗುಂಪಿನ ಶಾಸಕರು ಬಂಡಾಯವೆದ್ದಿದ್ದಾರೆ. ಪಶ್ಚಿಮ ಮಹಾರಾಷ್ಟ್ರ, ಉತ್ತರ ಮಹಾರಾಷ್ಟ್ರ ಮತ್ತು ಮರಾಠವಾಡದ ಅನೇಕ ಶಾಸಕರು ‘ಮಾತೋಶ್ರೀ’(ಉದ್ಧವ್ ಠಾಕ್ರೆ ನಿವಾಸ) ದಿಂದ ಕ್ಷಮೆ ಕೇಳಲು ಮತ್ತು ಅಲ್ಲಿಗೆ ಮರಳಲು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ,” ಎಂದು ವಿನಾಯಕ್ ರಾವತ್ ಹೇಳಿದ್ದಾರೆ.
ನಮ್ಮ ಬೆನ್ನ ಹಿಂದೆ ಮೋದಿ-ಶಾ ಶಕ್ತಿ ಇದೆ: ಏಕನಾಥ್ ಶಿಂಧೆ
ಅದಾಗ್ಯೂ, ಅಜಿತ್ ಪವಾರ್ ಎನ್ಡಿಎ ಜೊತೆ ಸೇರಿದ ಬಳಿಕ ತಮ್ಮ ಬಣದಲ್ಲಿ ಅಸಮಾಧಾನವಿದೆ ಎಂಬ ವರದಿಗಳನ್ನು ಸಿಎಂ ಏಕನಾಥ್ ಶಿಂಧೆ ನಿರಾಕರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಶಕ್ತಿ ನಮ್ಮ ಹಿಂದೆ ಇದೆ. ಅಜಿತ್ ಪವಾರ್ ಅವರ ಸೇರ್ಪಡೆಯಿಂದ ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವು ಬಲಗೊಳ್ಳುತ್ತಿದೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
“ನಮ್ಮ ಸರ್ಕಾರ ಇನ್ನೂ ಬಲಗೊಳ್ಳುತ್ತಿದೆ. ನಮ್ಮ ಹಿಂದೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಶಕ್ತಿ ಇದೆ. ಅಜಿತ್ ಪವಾರ್ ಸೇರ್ಪಡೆಯೊಂದಿಗೆ ನಮ್ಮ ಸರ್ಕಾರ ಇನ್ನಷ್ಟು ಬಲಗೊಂಡಿದೆ. ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಶಿವಸೇನೆಯಲ್ಲಿ ಯಾರೂ ಅಸಮಾಧಾನ ಹೊಂದಿಲ್ಲ” ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಆದರೆ, ಶಿಂಧೆ ಬಣದ ಸಂಸದ ಗಜಾನನ್ ಕೀರ್ತಿಕರ್ ಅವರು ತಮ್ಮ ಬಣದಲ್ಲಿ ಅಸಮಾಧಾನ ಇರುವುದನ್ನು ಒಪ್ಪಿಕೊಂಡಿದ್ದಾರೆ.
ಮಹಾರಾಷ್ಟ್ರ ಸಂಪುಟಕ್ಕೆ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಗುಂಪು ಸೇರ್ಪಡೆಗೊಂಡಿರುವುದು ಬಿಜೆಪಿ ಮತ್ತು ಶಿವಸೇನೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಸಚಿವಾಕಾಂಕ್ಷಿಗಳಲ್ಲಿ ಕೆಲವರು ಅಸಮಾಧಾನಗೊಂಡಿದ್ದಾರೆ. ಇದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಗಮನಕ್ಕೂ ಬಂದಿದೆ ಸಂಸದ ಗಜಾನನ ಕೀರ್ತಿಕರ್ ಬುಧವಾರ ಹೇಳಿದ್ದರು.
ಎನ್ಡಿಎ ಮೈತ್ರಿಕೂಟದಲ್ಲಿ ಎನ್ಸಿಪಿಯ ಒಂದು ಬಣವೂ ಸೇರಿರುವದರಿಂದ ಟಿಕೆಟ್ ಹಂಚಿಕೆಯಲ್ಲಿ ಕಡಿಮೆ ಸ್ಥಾನಕ್ಕೆ ತೃಪ್ತಿಕೊಳ್ಳಬೇಕಾದ ವಾತಾವರಣವೂ ನಿರ್ಮಾಣವಾಗಿದೆ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರೀಕ್ಷಿಸಿದ್ದ ಶಿಂಧೆ ಬಣ ಹಾಗೂ ಬಿಜೆಪಿ ಮುಖಂಡರುಗಳಲ್ಲೂ ಅಜಿತ್ ಪವಾರ್ ಬಣದ ಸೇರ್ಪಡೆ ಅಸಮಾಧನ ಉಂಟು ಮಾಡಿದೆ ಎಂದು ವರದಿಯಾಗಿದೆ.