ಶಿವಸೇನಾ ನಾಯಕನ ಹತ್ಯೆ; ನಾಲ್ವರಿಗೆ ಜೀವಾವಧಿ ಶಿಕ್ಷೆ

ಸಾಂದರ್ಭಿಕ ಚಿತ್ರ | PC : freepik.com
ಮುಂಬೈ: ಶಿವಸೇನಾ ನಾಯಕ ಮೋಹನ್ ರಾವತ್ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ವಿಶೇಷ ನ್ಯಾಯಾಧೀಶ ಎ.ಎನ್. ಸಿರಿಸ್ಕರ್ ಅವರು ನಾಲ್ವರನ್ನು ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಯಮಗಳ ಅಡಿಯಲ್ಲಿ ದೋಷಿಗಳು ಎಂದು ಪರಿಗಣಿಸಿದರು. ಆದರೆ, ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ ಅಡಿಯ ಆರೋಪವನ್ನು ತಳ್ಳಿ ಹಾಕಿದರು.
ಪ್ರಕರಣದಲ್ಲಿ ನ್ಯಾಯಾಲಯ ಮೂವರನ್ನು ಖುಲಾಸೆಗೊಳಿಸಿದೆ.
ನ್ಯಾಯಾಲಯ ಚಂದ್ರಕಾಂತ ಆಲಿಯಾಸ್ ಪಿಂಟ್ಯಾ ಬಲರಾಮ್ ಮ್ಹಾಸ್ಕರ್ (39), ಗಂಗಾರಾಮ್ ಆಲಿಯಾಸ್ ಗಂಗ್ಯಾ ಆತ್ಮಾರಾಮ್ ಲಿಂಗೆ (44), ಯೋಗೇಶ್ ನಾರಾಯಣ ರಾವತ್ (45) ಹಾಗೂ ಅಜಯ್ ಆಲಿಯಾಸ್ ಅಜಯ್ ಗಜಾನನ ಗೌರವ್ (37)ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಹಾಗೂ 5 ಸಾವಿರ ರೂ. ದಂಡವನ್ನೂ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ, ಮತ್ತೆ ಮೂರು ತಿಂಗಳು ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಶಿವಸೇನಾದ ಬದ್ಲಾಪುರ ನಗರ ಘಟಕದ ಉಪಾಧ್ಯಕ್ಷ ಮೋಹನ್ ರಾವತ್ ಅವರ ಮೇಲೆ 2014 ಮೇ 23ರಂದು ಅವರ ಕಚೇರಿಯಲ್ಲಿ ಗುಂಡು ಹಾರಿಸಲಾಗಿತ್ತು. ಅವರನ್ನು ಕೂಡಲೇ ಧನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅನಂತರ ದೊಂಬಿವಿಲ್ಲಿಯಲ್ಲಿರುವ ಏಮ್ಸ್ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅವರು ಅಲ್ಲಿ ಮೃತಪಟ್ಟಿದ್ದರು.





