ಪತ್ರಕರ್ತರ ಬಾಯಿ ಮುಚ್ಚಿಸಲು ನಮ್ಮ ವರದಿ ಬಳಸಿರುವುದು ಆಘಾತಕಾರಿ: ನ್ಯೂಯಾರ್ಕ್ ಟೈಮ್ಸ್

ಹೊಸದಿಲ್ಲಿ : ಪತ್ರಕರ್ತರ ಬಾಯಿಮುಚ್ಚಿಸಲು ಯಾವುದೇ ಸರಕಾರವು ನಮ್ಮ ವರದಿಯನ್ನು ಬಳಸುವುದು ಅತ್ಯಂತ ಆಘಾತಕಾರಿಯಾಗಿದೆ ಎಂದು ಅಮೆರಿಕದ ಪತ್ರಿಕೆ ‘ನ್ಯೂಯಾರ್ಕ್ ಟೈಮ್ಸ್’ ಹೇಳಿದೆ.
ಸುದ್ದಿ ವೆಬ್ಸೈಟ್ ‘ನ್ಯೂಸ್ ಕ್ಲಿಕ್’ನ ಕಚೇರಿ ಮತ್ತು ಅದರ ಪತ್ರಕರ್ತರ ಮನೆಗಳ ಮೇಲೆ ದಿಲ್ಲಿ ಪೊಲೀಸರು ದಾಳಿ ನಡೆಸಿದ ದಿನಗಳ ಬಳಿಕ ಅಮೆರಿಕದ ಪತ್ರಿಕೆ ಈ ಹೇಳಿಕೆ ನೀಡಿದೆ.
‘‘ಸ್ವತಂತ್ರ ಪತ್ರಿಕೋದ್ಯಮವು ವಾಸ್ತವ ಸಂಗತಿಗಳ ಬೆನ್ನತ್ತಿ ಹೋಗುತ್ತದೆ’’ ಎಂದು ‘ನ್ಯೂಯಾರ್ಕ್ ಟೈಮ್ಸ್’ನ ವಕ್ತಾರರೊಬ್ಬರು ‘ಸ್ಕ್ರಾಲ್’ ಸುದ್ದಿ ವೆಬ್ಸೈಟ್ನೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಚೀನಾದ ಹಿತಾಸಕ್ತಿಗಳೊಂದಿಗೆ ನ್ಯೂಸ್ ಕ್ಲಿಕ್ ಹೊಂದಿರುವ ನಂಟುಗಳನ್ನು ತೋರಿಸುವ ಪರಿಪೂರ್ಣ ವರದಿಯೊಂದನ್ನು ನಾವು ಪ್ರಕಟಿಸಿದೆವು. ಆದರೆ, ಯಾವುದೇ ಸರಕಾರವು ಪತ್ರಕರ್ತರ ಬಾಯಿಮುಚ್ಚಿಸಲು ನಮ್ಮ ವರದಿಯನ್ನು ಬಳಸಿದರೆ ಅದು ಅತ್ಯಂತ ಆಘಾತಕಾರಿ ಮತ್ತು ಅಸ್ವೀಕಾರಾರ್ಹ ಎಂಬುದಾಗಿ ನಾವು ಭಾವಿಸುತ್ತೇವೆ’’ ಎಂದು ಅವರು ಹೇಳಿದರು.
‘ಸ್ಕ್ರಾಲ್’ನಲ್ಲಿ ಕವಿತಾ ಕೃಷ್ಣನ್ ಬರೆದಿರುವ ಲೇಖನಕ್ಕೆ ‘ನ್ಯೂಯಾರ್ಕ್ ಟೈಮ್ಸ್’ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.
‘ನ್ಯೂಸ್ ಕ್ಲಿಕ್’ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ಆಗಸ್ಟ್ 5ರಂದು ಪ್ರಕಟಿಸಿತ್ತು. ಈ ವರದಿಗಾಗಿ ನ್ಯೂಸ್ ಕ್ಲಿಕ್ ವಿರುದ್ಧದ ಆರೋಪಗಳ ಬಗ್ಗೆ ಹೇಳಿಕೆ ಪಡೆಯಲು ನ್ಯೂಯಾರ್ಕ್ ಟೈಮ್ಸ್ ಕವಿತಾ ಕೃಷ್ಣರನ್ನು ಸಂಪರ್ಕಿಸಿತ್ತು. ಆದರೆ, ಹೇಳಿಕೆ ನೀಡಲು ಅವರು ನಿರಾಕರಿಸಿದ್ದರು. ಈ ವರದಿಯು, ನ್ಯೂಸ್ ಕ್ಲಿಕ್ ಈಗಾಗಲೇ ನೀಡಲಾಗುತ್ತಿರುವ ಕಿರುಕುಳವನ್ನು ಹೆಚ್ಚಿಸಬಹುದು ಎನ್ನುವ ಭೀತಿಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಲು ನಿರಾಕರಿಸಿದೆ ಎಂದು ಕವಿತಾ ಹೇಳಿದ್ದಾರೆ.
‘‘ಈಗ, ಪತ್ರಿಕೋದ್ಯಮವನ್ನು ಭಯೋತ್ಪಾದನೆಯೊಂದಿಗೆ ಸಮೀಕರಿಸಲು ಸರಕಾರವು ನ್ಯೂಯಾರ್ಕ್ ಟೈಮ್ಸ್ ನ ವರದಿಯನ್ನು ಬಳಸುತ್ತಿರುವುದು ಸ್ಪಷ್ಟವಾಗಿದೆ’’ ಎಂದು ಅವರು ತನ್ನ ಲೇಖನದಲ್ಲಿ ಹೇಳಿದ್ದರು. ತನ್ನ ವರದಿಯ ದುರ್ಬಳಕೆಯನ್ನು ನ್ಯೂಯಾರ್ಕ್ ಟೈಮ್ಸ್ ಯಾಕೆ ಪ್ರಶ್ನಿಸಿಲ್ಲ ಎಂದು ಪ್ರಶ್ನಿಸಿದ್ದರು.
ಜಗತ್ತಿನಾದ್ಯಂತ ‘‘ಚೀನಾದ ಅಪಪ್ರಚಾರವನ್ನು ಹರಡಲು’’ ಅಮೆರಿಕದ ತಂತ್ರಜ್ಞಾನ ಉದ್ಯಮಿ ನೆವಿಲ್ ರಾಯ್ ಸಿಂಘಮ್ ಒಡೆತನದ ಜಾಲವೊಂದರಿಂದ ನ್ಯೂಸ್ ಕ್ಲಿಕ್ ಹಣ ಪಡೆದುಕೊಂಡಿದೆ ಎಂದು ತನ್ನ ವರದಿಯಲ್ಲಿ ನ್ಯೂಯಾರ್ಕ್ ಟೈಮ್ಸ್ ಹೇಳಿಕೊಂಡಿತ್ತು. ಚೀನಾ ಸರಕಾರದ ಮಾಧ್ಯಮ ಯಂತ್ರದೊಂದಿಗೆ ಸಿಂಘಮ್ ನಿಕಟ ಸಂಬಂಧ ಹೊಂದಿದ್ದಾರೆ ಹಾಗೂ ವಿವಿಧ ದೇಶಗಳಲ್ಲಿ ಚೀನಾದ ಅಭಿಪ್ರಾಯಗಳಿಗೆ ಉತ್ತೇಜನೆ ನೀಡಿದ್ದಾರೆ ಎಂದು ಪತ್ರಿಕೆ ಹೇಳಿತ್ತು.
ಎರಡು ವಾರಗಳ ಬಳಿಕ, ದಿಲ್ಲಿ ಪೊಲೀಸರು ನ್ಯೂಸ್ ಕ್ಲಿಕ್ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಮತ್ತು ಯುಎಪಿಎ ಕಾಯ್ದೆಗಳಡಿ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಮಂಗಳವಾರ ಪೊಲೀಸರು ನ್ಯೂಸ್ ಕ್ಲಿಕ್ ಪತ್ರಕರ್ತರ ಮನೆಗಳಿಗೆ ದಾಳಿ ಮಾಡಿ, ವೆಬ್ ಸೈಟ್ ನ ಕಚೇರಿಗೆ ಬೀಗಮುದ್ರೆ ಹಾಕಿದ್ದಾರೆ. ಸಂಪಾದಕ ಪ್ರಬೀರ್ ಪುರಕಾಯಸ್ತ ಮತ್ತು ಮಾನವ ಸಂಪನ್ಮೂಲಗಳ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರಬರ್ತಿಯನ್ನು ಬಂಧಿಸಿದ್ದಾರೆ.







