ಸಲ್ಮಾನ್ ಖಾನ್ ಚಿತ್ರೀಕರಣದ ಸೆಟ್ ಗೆ ಅಕ್ರಮವಾಗಿ ನುಗ್ಗಿದ ವ್ಯಕ್ತಿ ವಶಕ್ಕೆ

ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಅವರ ಚಿತ್ರೀಕರಣದ ಸೆಟ್ಗೆ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಯೊಬ್ಬ, ಅಕ್ರಮ ಪ್ರವೇಶದ ಬಗ್ಗೆ ಪ್ರಶ್ನಿಸಿದಾಗ "ನಾನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರಿಗೆ ಕರೆ ಮಾಡಬೇಕೇ" ಎಂದು ಮರು ಪ್ರಶ್ನೆ ಎಸೆದ ಘಟನೆ ಬುಧವಾರ ವರದಿಯಾಗಿದೆ.
ದಾದರ್ನ ಶಿವಾಜಿ ಪಾರ್ಕ್ ಪ್ರದೇಶದಲ್ಲಿ ಖಾನ್ ಚಿತ್ರವೊಂದರ ಶೂಟಿಂಗ್ ನಡೆಸುತ್ತಿದ್ದರು. ಆಗ ಒಬ್ಬ ವ್ಯಕ್ತಿ ಅಕ್ರಮವಾಗಿ ಅಲ್ಲಿಗೆ ಪ್ರವೇಶಿಸಿದ. ಆತನ ಚಲನ ವಲನಗಳು ಅನುಮಾನಾಸ್ಪದ ಎನಿಸಿದಾಗ ಕೆಲವರು ಆತನನ್ನು ಏನು ಮಾಡುತ್ತಿದ್ದಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆ ವ್ಯಕ್ತಿ "ಬಿಷ್ಣೋಯಿ ಕೋ ಬುಲಾವ್ ಕ್ಯಾ" ಎಂದು ಮರು ಪ್ರಶ್ನೆ ಎಸೆದಿದ್ದಾನೆ.
ತಕ್ಷಣ ಆತನನ್ನು ವಶಕ್ಕೆ ಪಡೆದು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲಿ ಆತನ ವಿಚಾರಣೆ ನಡೆಸಲಾಗುತ್ತಿದೆ.
ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಎದುರು ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಗುಂಡಿನ ದಾಳಿಯ ಹೊಣೆಯನ್ನು ಬಿಷ್ಣೋಯಿ ಗ್ಯಾಂಗ್ ಹೊತ್ತಿತ್ತು. ಬಿಷ್ಣೋಯಿ ಗ್ಯಾಂಗ್ ಮಹಾರಾಷ್ಟ್ರ ಸಚಿವ ಬಾಬಾ ಸಿದ್ದಿಕಿ ಅವರನ್ನು ಬಾಂದ್ರಾದಲ್ಲಿ ಕಳೆದ ಅಕ್ಟೋಬರ್ನಲ್ಲಿ ಹತ್ಯೆ ಮಾಡಿದ ಸಂದರ್ಭದಲ್ಲಿ ಕೂಡಾ ಖಾನ್ ಹೆಸರನ್ನು ಗ್ಯಾಂಗ್ ಉಲ್ಲೇಖಿಸಿತ್ತು. ಈ ರಾಜಕಾರಣಿ ಸಲ್ಮಾನ್ ಖಾನ್ಗೆ ನಿಕಟವಾಗಿದ್ದ ಹಿನ್ನೆಲೆಯಲ್ಲಿ ಗುಂಡಿಕ್ಕಿ ಸಾಯಿಸಲಾಗಿದೆ. ಸಲ್ಮಾನ್ ಖಾನ್ಗೆ ಯಾರು ನೆರವಾಗುತ್ತಾರೆಯೋ ಅವರನ್ನು ಹತ್ಯೆ ಮಾಡುವುದಾಗಿ ಗ್ಯಾಂಗ್ನ ಒಬ್ಬ ವ್ಯಕ್ತಿ ಬೆದರಿಕೆ ಹಾಕಿದ್ದ.
ಖ್ಯಾತ ನಟನಿಗೆ ಆ ಬಳಿಕ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿವೆ.







