ಅಮೆರಿಕದ ಮೇಲೆ ಶೇ. 75ರಷ್ಟು ಸುಂಕ ವಿಧಿಸುವ ಧೈರ್ಯ ಪ್ರದರ್ಶಿಸಿ: ಪ್ರಧಾನಿ ಮೋದಿಗೆ ಅರವಿಂದ್ ಕೇಜ್ರಿವಾಲ್ ಸವಾಲು

Photo : indiatoday
ಹೊಸದಿಲ್ಲಿ: “ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿರುವುದಕ್ಕೆ ಪ್ರತೀಕಾರವಾಗಿ ಅಮೆರಿಕದ ಸರಕುಗಳ ಮೇಲೆ ಶೇ. 75ರಷ್ಟು ಸುಂಕ ವಿಧಿಸುವ ಒಂದಿಷ್ಟು ಧೈರ್ಯ ಪ್ರದರ್ಶಿಸಿ” ಎಂದು ಪ್ರಧಾನಿ ನರೇಂದ್ರ ಮೋದಿಗೆ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, “ಇಡೀ ದೇಶ ನಿಮ್ಮ ಹಿಂದಿದ್ದು, ಒಂದಿಷ್ಟು ಧೈರ್ಯ ಪ್ರದರ್ಶಿಸಿ ಎಂದು ನಾವು ಪ್ರಧಾನಿಗಳನ್ನು ಆಗ್ರಹಿಸುತ್ತೇವೆ. ಭಾರತದ ರಫ್ತಿನ ಮೇಲೆ ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದೆ. ನೀವು ಅಮೆರಿಕದಿಂದ ಬರುವ ಆಮದಿನ ಮೇಲೆ ಶೇ. 75ರಷ್ಟು ಸುಂಕ ವಿಧಿಸಿ. ಅದನ್ನು ತಡೆದುಕೊಳ್ಳರಲು ದೇಶ ಸಿದ್ಧವಿದೆ. ಸುಮ್ಮನೆ ಸುಂಕ ವಿಧಿಸಿ. ಟ್ರಂಪ್ ತಲೆ ಬಾಗುತ್ತಾರೊ ಇಲ್ಲವೊ ನೋಡಿ” ಎಂದು ಕಿವಿಮಾತು ಹೇಳಿದ್ದಾರೆ.
ಡಿಸೆಂಬರ್ 31, 2025ರವರೆಗೆ ಅಮೆರಿಕದ ಹತ್ತಿ ಆಮದಿನ ಮೇಲಿನ ಶೇ. 11ರಷ್ಟು ಸುಂಕಕ್ಕೆ ವಿನಾಯಿತಿ ನೀಡುವ ಕೇಂದ್ರ ಸರಕಾರದ ನಿರ್ಧಾರವನ್ನೂ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. ಇಂತಹ ನಡೆಯು ಅಮೆರಿಕದ ರೈತರನ್ನು ಶ್ರೀ ವಮಂತರನ್ನಾಗಿಸಿ, ಸ್ಥಳೀಯ ರೈತರಿಗೆ ಅನನುಕೂಲವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.





