ಅಂಗವಿಕಲರ ಕುರಿತು ಹಾಸ್ಯ | ಕ್ಷಮೆಯಾಚಿಸುವಂತೆ ಕಾಮಿಡಿಯನ್ಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

Photo source: X
ಹೊಸದಿಲ್ಲಿ : ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂಗವಿಕಲರ ಕುರಿತು ಹಾಸ್ಯ ಮಾಡಿದ್ದಕ್ಕೆ ಸಮಯ್ ರೈನಾ ಸೇರಿದಂತೆ ಅನೇಕ ಕಾಮಿಡಿಯನ್ಗಳನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ ಮಾಲ್ಯಾ ಬಗ್ಚಿ ಅವರ ಪೀಠವು “ಕ್ಯೂರ್ ಎಸ್ಎಂಎ ಫೌಂಡೇಶನ್ ಆಫ್ ಇಂಡಿಯಾ” ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನಡೆಸಿದೆ. ಈ ಸಂಸ್ಥೆಯು ಬೆನ್ನುಮೂಳೆಯ ಸ್ನಾಯು ಕ್ಷೀಣತೆ(ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ ಕಾಯಿಲೆ) ಯಿಂದ ಬಳಲುತ್ತಿರುವ ರೋಗಿಗಳಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡುತ್ತದೆ.
ಅಂಗವಿಕಲರ ಹಾಸ್ಯ ಕುರಿತ ಮನವಿಯನ್ನು ʼಇಂಡಿಯಾಸ್ ಗಾಟ್ ಲೇಟೆಂಟ್ʼ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳ ಜೊತೆ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯ ವಿರುದ್ಧ ದೂರು ದಾಖಲಾಗಿತ್ತು.
ಫೌಂಡೇಶನ್ ಪರವಾಗಿ ಹಿರಿಯ ವಕೀಲ ಅಪರಾಜಿತಾ ಸಿಂಗ್ ಹಾಜರಾಗಿ, “ಎಲ್ಲ ಕಾಮಿಡಿಯನ್ಗಳು ಈಗಾಗಲೇ ಕ್ಷಮೆ ಕೇಳಿದ್ದಾರೆ, ಇದು ಒಳ್ಳೆಯ ಬೆಳವಣಿಗೆ” ಎಂದರು.
ಕೇಂದ್ರ ಸರಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಕಾಮಿಡಿಯನ್ಗಳು ಮತ್ತು ಇನ್ಫ್ಲುವೆನ್ಸರ್ಗಳಿಗಾಗಿ ಮಾರ್ಗಸೂಚಿಗಳನ್ನು ರೂಪಿಸಲು ಇನ್ನೂ ಸ್ವಲ್ಪ ಸಮಯ ಬೇಕು. ಆದರೆ ಸಂಪೂರ್ಣ ನಿಷೇಧವೇರಲು ಸಾಧ್ಯವಿಲ್ಲ ಎಂದು ಹೇಳಿದರು.
ನ್ಯಾಯಪೀಠವು ಮಾರ್ಗಸೂಚಿಗಳು ಕೇವಲ ಒಂದು ಘಟನೆಗೆ ಪ್ರತಿಕ್ರಿಯೆಯಾಗಿರಬಾರದು ಎಂದು ತಿಳಿಸಿದೆ. “ಭವಿಷ್ಯದ ಸವಾಲುಗಳನ್ನೂ ಗಮನದಲ್ಲಿಟ್ಟುಕೊಂಡು, ಸಮಗ್ರ ರೀತಿಯಲ್ಲಿ ಮಾರ್ಗಸೂಚಿಗಳನ್ನು ರೂಪಿಸಬೇಕು. ಈ ಬಗ್ಗೆ ತಜ್ಞರ ಅಭಿಪ್ರಾಯವೂ ಅಗತ್ಯ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
"ಹಾಸ್ಯವು ಜೀವನದ ಒಂದು ಭಾಗ ಮತ್ತು ನಾವು ಹಾಸ್ಯ ಮಾಡಬಹುದು. ಆದರೆ ನೀವು ಇತರರನ್ನು ಗೇಲಿ ಮಾಡಲು ಪ್ರಾರಂಭಿಸಿದಾಗ, ಸೂಕ್ಷ್ಮತೆಯ ಉಲ್ಲಂಘನೆಯಾಗುತ್ತದೆ. ಭಾರತವು ವೈವಿಧ್ಯಮಯ ದೇಶವಾಗಿದೆ ಮತ್ತು
ಇಂದಿನ ಕಾಮಿಡಿಯನ್ಗಳು ಮತ್ತು ಇನ್ಫ್ಲುವೆನ್ಸರ್ ಗಳು ಎಂದು ಕರೆಯಲ್ಪಡುವವರು ಭಾಷಣವನ್ನು ವಾಣಿಜ್ಯೀಕರಣಗೊಳಿಸುವಾಗ, ಒಂದು ಸಮುದಾಯವನ್ನು ಬಳಸಿಕೊಂಡು ಅವರ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.







