ಶ್ರಮಜೀವಿ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣ ; ಇಬ್ಬರು ದೋಷಿಗಳಿಗೆ ಮರಣ ದಂಡನೆ
Photo: PTI
ಲಕ್ನೊ: ಕನಿಷ್ಠ 14 ಮಂದಿ ಸಾವನ್ನಪ್ಪಿದ ಹಾಗೂ 62 ಮಂದಿ ಗಾಯಗೊಂಡ 2005ರ ಶ್ರಮಜೀವಿ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಬಾಂಗ್ಲಾದೇಶದ ಓರ್ವ ಸೇರಿದಂತೆ ಇಬ್ಬರು ದೋಷಿಗಳಿಗೆ ಔನ್ಪುರದ ಸೆಷನ್ಸ್ ನ್ಯಾಯಾಲಯ ಬುಧವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ದೋಷಿಗಳಿಗೆ ತಲಾ 5 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ. ಶ್ರಮಜೀವಿ ಎಕ್ಸ್ ಪ್ರೆಸ್ ರೈಲು ಸ್ಫೋಟ ಪ್ರಕರಣದಲ್ಲಿ ಇವರಿಬ್ಬರನ್ನು ದೋಷಿಗಳು ಎಂದು ಸೆಷನ್ಸ್ ನ್ಯಾಯಾಲಯ ಡಿಸೆಂಬರ್ 23ರಂದು ಘೋಷಿಸಿತ್ತು.
‘‘ಶ್ರಮಜೀವಿ ರೈಲು ಸ್ಫೋಟ ಪ್ರಕರಣದ ದೋಷಿಗಳಾದ ಹಿಲಾಲ್ ಆಲಿಯಾಸ್ ಹಿಲಾಲುದ್ದೀನ್ ಹಾಗೂ ನಫಿಕುಲ್ ವಿಶ್ವಾಸ್ ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಜೇಶ್ ಕುಮಾರ್ ರಾಯ್ ಅವರು ಮರಣ ದಂಡನೆ ವಿಧಿಸಿ ತೀರ್ಪು ನೀಡಿದ್ದಾರೆ’’ ಎಂದು ಜಿಲ್ಲಾ ಸರಕಾರಿ ವಕೀಲ ಸತೀಶ್ ಪಾಂಡೆ ತಿಳಿಸಿದ್ದಾರೆ.
ಬಾಂಗ್ಲಾದೇಶದ ನಿವಾಸಿಯಾಗಿರುವ ಹಿಲಾಲುದ್ದೀನ್ ರೈಲಿನಲ್ಲಿ ಬಾಂಬ್ ಇರಿಸಿದ ಆರೋಪಕ್ಕೆ ಒಳಗಾಗಿದ್ದರೆ, ಪಶ್ಚಿಮಬಂಗಾಳದ ನಿವಾಸಿಯಾಗಿರುವ ನಫಿಕುಲ್ ವಿಶ್ವಾಸ್ ಆತನಿಗೆ ನೆರವು ನೀಡಿದ ಆರೋಪಕ್ಕೆ ಒಳಗಾಗಿದ್ದ. ಶ್ರಮಜೀವಿ ರೈಲು ಸ್ಪೋಟ ಪ್ರಕರಣದಲ್ಲಿ ಇತರ ಇಬ್ಬರಿಗೆ 2016ರಲ್ಲಿ ಮರಣದಂಡನೆ ವಿಧಿಸಲಾಗಿತ್ತು.
ಈ ಇಬ್ಬರು ದೋಷಿಗಳನ್ನು ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ ನಲ್ಲಿರುವ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಪ್ರಕರಣ ಹಲವು ಬಾರಿ ಮುಂದೂಡಿಕೆಯಾಗಿರುವುದರಿಂದ ಅಂತಿಮ ವಿಚಾರಣೆಗೆ 6 ವರ್ಷಗಳು ಬೇಕಾದವು.
ಉತ್ತರಪ್ರದೇಶ ಜೌನ್ಪುರ ರೈಲು ನಿಲ್ದಾಣದ ಸಮೀಪ ಪಾಟ್ನಾ-ನ್ಯೂಡೆಲ್ಲಿ ರೈಲಿನ ಬೋಗಿಯಲ್ಲಿ 2005ರ ಜುಲೈ 28ರಂದು ಸಂಜೆ ಸುಮಾರು 5 ಗಂಟೆಗೆ ಸ್ಫೋಟ ಸಂಭವಿಸಿತ್ತು.