ಭಾರತದ ಶುಭಾಂಶು ಶುಕ್ಲಾ ಅವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲಿರುವ ಆಕ್ಸಿಯಮ್ 4 ಯೋಜನೆ
ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಶುಭಾಂಶು ಶುಕ್ಲಾ ಯಾರು?

ಶುಭಾಂಶು ಶುಕ್ಲಾ | PC : X
ಹೊಸದಿಲ್ಲಿ: ಭಾರತೀಯ ವಾಯುಪಡೆಯ ಪೈಲಟ್ ಹಾಗು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಇತರ ಮೂವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳಿಸುವ ಆಕ್ಸಿಯಮ್ 4 ಮಿಷನ್ನ ಉಡಾವಣೆ ಮತ್ತೊಮ್ಮೆ ಮುಂದೂಡಿಕೆಯಾಗಿದೆ.
ಈಗ, ಜೂನ್ 22 ಕ್ಕೆ ಅದು ಉಡಾವಣೆಗೊಳ್ಳಲಿದೆ ಎಂದು ಆ್ಯಕ್ಸಿಯಂ ಸ್ಪೇಸ್ ಬುಧವಾರ ತಿಳಿಸಿದೆ. ಇದರೊಂದಿಗೆ ಈ ಮಿಷನ್ ಅನ್ನು ಐದನೇ ಬಾರಿಗೆ ಮುಂದೂಡಿದಂತಾಗಿದೆ.
ಆಕ್ಸಿಯಮ್ 4 ಮಿಷನ್ ಅಮೆರಿಕಾ, ಭಾರತ, ಪೋಲೆಂಡ್ ಮತ್ತು ಹಂಗೇರಿಗಳ ಗಗನಯಾತ್ರಿಗಳನ್ನು ಒಳಗೊಂಡಿದೆ.
ಈ ಆಕ್ಸಿಯಮ್ 4 ಮಿಷನ್ನ ಪೈಲಟ್ ಆಗಿ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ.
ಜೂನ್ 19 ರಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ (KSC) ಸ್ಪೇಸ್ಎಕ್ಸ್ನ
ಫಾಲ್ಕನ್ 9 ರಾಕೆಟ್ನಲ್ಲಿ ಉಡಾವಣೆಗೊಳ್ಳುವುದೆಂದು ನಿರ್ಧರಿಸಲಾಗಿತ್ತು. ಅದಕ್ಕೂ ಮೊದಲು, ಮೂಲತಃ ಮೇ 29 ರಂದು ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು.
ಆದರೆ ನಂತರ ಜೂನ್ 8, ನಂತರ ಜೂನ್ 10 ಮತ್ತು ಜೂನ್ 11 ಕ್ಕೆ ಮುಂದೂಡಲಾಯಿತು.
ಫಾಲ್ಕನ್ 9 ವಾಹನ ಸನ್ನದ್ಧಗೊಳಿಸುವಲ್ಲಿನ ವಿಳಂಬ, ಹವಾಮಾನ ಪರಿಸ್ಥಿತಿಗಳು, ಫಾಲ್ಕನ್ 9 ರಾಕೆಟ್ನಲ್ಲಿ ದ್ರವ ಆಮ್ಲಜನಕ ಸೋರಿಕೆ ಮತ್ತು ISS ನಲ್ಲಿರುವ ಸೇವಾ ಮಾಡ್ಯೂಲ್ನಲ್ಲಿನ ದೋಷ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಕಾರ್ಯಾಚರಣೆಯನ್ನು ಮುಂದೂಡುತ್ತಲೇ ಬರಲಾಯಿತು.
ಈಗ ಐದನೇ ಬಾರಿಗೆ ಉಡಾವಣೆಯನ್ನು ಮುಂದೂಡಲಾಗಿದೆ.
ರಷ್ಯಾದ ವಿಭಾಗದಲ್ಲಿ ಇತ್ತೀಚೆಗೆ ನಡೆದ ದುರಸ್ತಿಗಳ ನಂತರ ಕಕ್ಷೆಯ ಪ್ರಯೋಗಾಲಯದಲ್ಲಿನ
ಕಾರ್ಯಾಚರಣೆಗಳ ಮೌಲ್ಯಮಾಪನಕ್ಕಾಗಿ ನಾಸಾಗೆ ಅವಕಾಶ ನೀಡುವ ಸಲುವಾಗಿ ಜೂನ್ 22ಕ್ಕೆ ನಡೆಸಲು ನಿರ್ಧರಿಸಲಾಗಿದೆ.
ಏನಿದು ಆಕ್ಸಿಯಮ್ 4 ಮಿಷನ್ ?
ಹಲವಾರು ಕಾರಣಗಳಿಂದಾಗಿ ಆಕ್ಸಿಯಮ್ 4 ಮಿಷನ್ ಭಾರತಕ್ಕೆ ಮಹತ್ವದ್ದಾಗಿದೆ. ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರೊಂದಿಗಿನ ಮಿಷನ್ ಇದಾಗಿದೆ.
ರಾಕೇಶ್ ಶರ್ಮಾ ಅವರ 1984 ರ ಮಿಷನ್ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಭಾಂಶು ಶುಕ್ಲಾ ಪಾತ್ರವಾಗಲಿದ್ದಾರೆ.
ಈ ಕಾರ್ಯಾಚರಣೆ ವೇಳೆ ಶುಭಾಂಶು ಶುಕ್ಲಾ ನಾಸಾ ಜೊತೆ ಜಂಟಿ ಸಂಶೋಧನೆಯಲ್ಲಿ ಭಾಗಿಯಾಗಲಿದ್ದಾರೆ.
ಇದು ಭಾರತದ ಮಾನವ ಬಾಹ್ಯಾಕಾಶ ಮಿಷನ್ ಕಾರ್ಯಕ್ರಮದ ಗಮನಾರ್ಹ ಪ್ರಗತಿ ಎಂದು ಹೇಳಲಾಗುತ್ತಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ವಾಸ್ತವ್ಯದ ಸಮಯದಲ್ಲಿ, ಇಸ್ರೋ ಹಲವಾರು ರಾಷ್ಟ್ರೀಯ ಸಂಶೋಧನೆ ಹಾಗು ಅಭಿವೃದ್ಧಿ ಪ್ರಯೋಗಾಲಯಗಳು ಮತ್ತು
ಶೈಕ್ಷಣಿಕ ಸಂಸ್ಥೆಗಳು ಪ್ರಸ್ತಾಪಿಸಿದ ಏಳು ಮೈಕ್ರೋಗ್ರಾವಿಟಿ ಸಂಶೋಧನಾ ಪ್ರಯೋಗಗಳನ್ನು ನಡೆಸಲಿದೆ ಎಂದು ವರದಿಗಳು ಹೇಳಿವೆ.
ಈ ಪ್ರಯೋಗಗಳಲ್ಲಿ ಸಸ್ಯಗಳ ರೀತಿಯಲ್ಲಿ ಸೂರ್ಯನ ಬೆಳಕನ್ನು ಬಳಸಿಕೊಂಡು ಶಕ್ತಿ ಉತ್ಪಾದಿಸುವ,
ಬ್ಲೂ ಗ್ರೀನ್ ಆಲ್ಗೇ (ಪಾಚಿ) ಎಂದೂ ಕರೆಯಲಾಗುವ ಒಂದು ವಿಧದ ಸಣ್ಣ ಬ್ಯಾಕ್ಟೀರಿಯಾಗಳ ಅಧ್ಯಯನವೂ ಸೇರಿದೆ.
ಈ ಬ್ಯಾಕ್ಟೀರಿಯಾಗಳು ಗಗನಯಾತ್ರಿಗಳಿಗೆ ಅವಶ್ಯಕವಾದ ಆಮ್ಲಜನಕವನ್ನು ಉತ್ಪಾದಿಸಿ,
ಸಜೀವ ವ್ಯವಸ್ಥೆಯೊಂದನ್ನು ನಿರ್ಮಿಸಲಿವೆ.
ಇವು ಚಂದ್ರ ಅಥವಾ ಇತರ ಗ್ರಹಗಳಲ್ಲಿನ ಸುದೀರ್ಘ ವಾಸಕ್ಕೆ ನೆರವಾಗಲಿವೆ ಎನ್ನಲಾಗಿದೆ.
ಇದಲ್ಲದೆ, ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳು ಮೊಳಕೆಯೊಡೆಯುವುದು ಮತ್ತು ಬಾಹ್ಯಾಕಾಶದಲ್ಲಿ ಒಂದು ಪ್ರಾಣಿಸಂತತಿಯಾದ ಟಾರ್ಡಿಗ್ರೇಡ್ಗಳ ಬದುಕುಳಿಯುವಿಕೆ, ಪುನರುಜ್ಜೀವನ, ಸಂತಾನೋತ್ಪತ್ತಿ ಕುರಿತ ಅಧ್ಯಯನವೂ ನಡೆಯಲಿದೆ.
ಏಳು ಪ್ರಯೋಗಗಳ ಹೊರತಾಗಿ, ನಾಸಾ ಮತ್ತು ಐಎಸ್ಆರ್ಪಿ ಮಾನವ ಸಂಶೋಧನಾ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸಿದ ಐದು ಇತರ ಪ್ರಯೋಗಗಳನ್ನು ನಡೆಸುತ್ತವೆ.
ಶುಭಾಂಶು ಶುಕ್ಲಾ ಯಾರು?
ಭಾರತೀಯ ವಾಯುಪಡೆಯ (IAF) ಅನುಭವಿ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
ಅಕ್ಟೋಬರ್ 10, 1985 ರಂದು ಭಾರತದ ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದರು. ಜೂನ್ 2006 ರಲ್ಲಿ IAF ಫೈಟರ್ ವಿಂಗ್ಗೆ ನಿಯೋಜನೆಗೊಂಡರು. ಅವರು Su-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ಸೇರಿದಂತೆ ವಿವಿಧ ವಿಮಾನಗಳಲ್ಲಿ 2,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಮಾರ್ಚ್ 2024 ರಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಏರಿದರು.
ಇವರು ಫೈಟರ್ ಕಾಂಬ್ಯಾಟ್ ಲೀಡರ್ ಕೂಡ ಆಗಿದ್ದಾರೆ.
2019ರಲ್ಲಿ ಶುಭಾಂಶು ಅವರನ್ನು ಗಗನಯಾನಕ್ಕೆ ಇಸ್ರೋ ಆಯ್ಕೆ ಮಾಡಿತ್ತು. ಅವರು ರಷ್ಯಾದ ಮಾಸ್ಕೋದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ಪ್ರಾರಂಭಿಸಿದ್ದರು.







