ಶುಭಾಂಶು ಶುಕ್ಲಾ ಆ.17ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆ

ಶುಭಾಂಶು ಶುಕ್ಲಾ | PC : PTI
ಹೊಸದಿಲ್ಲಿ,ಜು.16: ಆಕ್ಸಿಯಂ-4 ಬಾಹ್ಯಾಕಾಶ ಅಭಿಯಾನದ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ 18 ದಿನಗಳ ವಾಸ್ತವ್ಯದ ಬಳಿಕ ಮಂಗಳವಾರ ಭೂಮಿಗೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಕಾರ್ಯಾಚರಣೆ ನಂತರದ ಸರಣಿ ಕಾರ್ಯವಿಧಾನಗಳ ಬಳಿಕ ಆ.17ರ ವೇಳೆಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವರು,‘ಶುಕ್ಲಾರ ಪುನರ್ವಸತಿ,ವಿವರಣಾತ್ಮಕ ಬೈಠಕ್ಗಳು ಮತ್ತು ಇಸ್ರೋ ತಂಡದೊಂದಿಗೆ ಸರಣಿ ಚರ್ಚೆಗಳು ಸೇರಿದಂತೆ ಅನುಸರಿಸಬೇಕಾದ ಕೆಲವು ಪ್ರಮಾಣಿತ ಕಾರ್ಯಾಚರಣಾ ವಿಧಾನ(ಎಸ್ಪಿಒ)ಗಳಿವೆ. ಅವರು ಆ.17ರ ವೇಳೆಗೆ ದಿಲ್ಲಿಯಲ್ಲಿರುತ್ತಾರೆ ಎಂದು ನಾವು ನಿರೀಕ್ಷಿಸಬಹುದು’ ಎಂದು ಹೇಳಿದರು.
ಅಭಿಯಾನವನ್ನು ‘ಅಭೂತಪೂರ್ವ’ ಎಂದು ಬಣ್ಣಿಸಿದ ಸಿಂಗ್, ಕಕ್ಷೀಯ ಪ್ರಯೋಗಶಾಲೆಯಲ್ಲಿ ತನ್ನ ವಾಸ್ತವ್ಯದ ಅವಧಿಯಲ್ಲಿ ಶುಕ್ಲಾ ನಡೆಸಿದ ಪ್ರಯೋಗಗಳು ಕಡಿಮೆ ಗುರುತ್ವಾಕರ್ಷಣೆಯಲ್ಲಿ ಮಾನವನ ಉಳಿವು ಮತ್ತು ಜೀವನಕ್ಕೆ ನಿಕಟವಾಗಿ ಸಂಬಂಧಿಸಿದ್ದವು. ಈ ಪ್ರಯೋಗಗಳು ಭಾರತೀಯರಿಗೆ ಮಾತ್ರವಲ್ಲ,ಇಡೀ ಮಾನವತೆಗೆ ಪ್ರಯೋಜನಕಾರಿಯಾಗಿವೆ ಎಂದು ಹೇಳಿದರು.
ಶುಕ್ಲಾರ ಬಾಹ್ಯಾಕಾಶ ಯಾನವು ಜಾಗತಿಕ ವೈಜ್ಞಾನಿಕ ಸಮುದಾಯದಲ್ಲಿ ಭಾರತದ ಹೆಚ್ಚುತ್ತಿರುವ ಪಾತ್ರವನ್ನು ಪ್ರತಿಫಲಿಸಿದೆ ಎಂದರು.





