ಐಎಸ್ಎಸ್ ಅಭಿಯಾನ ಯಶಸ್ವಿ | ವಾರಾಂತ್ಯದಲ್ಲಿ ತಾಯ್ನಾಡಿಗೆ ಮರಳಲಿರುವ ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ | PC : PTI
ಹೊಸದಿಲ್ಲಿ,ಆ.14: ಭಾರತದ ದ್ವಿತೀಯ ಗಗನಯಾನಿ ಹಾಗೂ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಈ ವಾರಾಂತ್ಯದಲ್ಲಿ ತಾಯ್ನಾಡಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ತಿಳಿಸಿದರು.
ತನ್ನ ಕುಟುಂಬವನ್ನು ಭೇಟಿಯಾಗಲು ತವರೂರು ಲಕ್ನೋಕ್ಕೆ ತೆರಳುವ ಮುನ್ನ ದಿಲ್ಲಿಯಲ್ಲಿ ಅಲ್ಪವಾಸ್ತವ್ಯದ ಸಂದರ್ಭ ಶುಕ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಶುಕ್ಲಾ ಆ.23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗಿಯಾಗಲು ದಿಲ್ಲಿಗೆ ಮರಳಿದ್ದಾರೆ ಎಂದೂ ಅವರು ತಿಳಿಸಿದರು.
ಶುಕ್ಲಾ ಖಾಸಗಿ ಬಾಹ್ಯಾಕಾಶ ಅಭಿಯಾನ ಆಕ್ಸಿಯಂ-4ರ ತಂಡದ ಇತರ ಮೂವರೊಂದಿಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದರು. ಜೂ. 25ರಂದು ಫ್ಲೋರಿಡಾದಿಂದ ಯಾನವನ್ನು ಆರಂಭಿಸಿದ್ದ ಆಕ್ಸಿಯಂ-4 ಜೂ.26ರಂದು ಐಎಸ್ಎಸ್ ತಲುಪಿತ್ತು. ಜು.15ರಂದು ಸ್ಯಾನ್ಡಿಯಾಗೋ ಕರಾವಳಿಯಾಚೆ ಪೆಸಿಫಿಕ್ ಸಾಗರದಲ್ಲಿ ಬಂದಿಳಿದಿದ್ದರು. ತನ್ನ 18 ದಿನಗಳ ಅಭಿಯಾನದಲ್ಲಿ ಶುಕ್ಲಾ 60ಕ್ಕೂ ಅಧಿಕ ಪ್ರಯೋಗಗಳನ್ನು ಕೈಗೊಂಡಿದ್ದರು.
ಶುಕ್ಲಾರ ಯಶಸ್ವಿ ಬಾಹ್ಯಾಕಾಶ ಯಾನವನ್ನು 2027ರಲ್ಲಿ ನಡೆಯುವ ನಿರೀಕ್ಷೆಯಿರುವ ಭಾರತದ ಸ್ವಂತ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮ ‘ಗಗನಯಾನ’ ಅಭಿಯಾನಕ್ಕೆ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.







