ಮೇ ತಿಂಗಳಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಮಾಡಲಿರುವ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ

ಶುಭಾಂಶು ಶುಕ್ಲಾ | PC : @IAF_MCC
ಮುಂಬೈ: ಭಾರತದ ಬಾಹ್ಯಾಕಾಶ ಪಯಣದ ಇತಿಹಾಸದಲ್ಲೇ ಬೃಹತ್ ಮೈಲುಗಲ್ಲನ್ನು ಸೃಷ್ಟಿಸಲಿರುವ ಗಗನಯಾನಕ್ಕೆ ಸಮಯ ನಿಗದಿಗೊಂಡಿದೆ. ಭಾರತದ ನಿಯೋಜಿತ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆಂದು ಕೇಂದ್ರ ಸರಕಾರ ಶುಕ್ರವಾರ ಘೋಷಿಸಿದೆ.
‘‘ಭಾರತೀಯ ಗಗನಯಾನಿಯನ್ನು ಒಯ್ಯಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಮಿಶನ್ ಮುಂದಿನ ತಿಂಗಳಿಗೆ ನಿಗದಿಯಾಗಿದೆ. ಇದರೊಂದಿಗೆ ಭಾರತವು ತನ್ನ ಬಾಹ್ಯಾಕಾಶ ಪಯಣದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯಲು ಸಜ್ಜಾಗಿದೆ. ಇಸ್ರೋ ಬಾಹ್ಯಾಕಾಶದಲ್ಲಿ ಹೊಸ ಗಡಿಗಳನ್ನು ತೆರೆಯುತ್ತಿರುವಂತೆಯೇ ಭಾರತೀಯ ಗಗನಯಾನಿಯೊಬ್ಬರು ಐತಿಹಾಸಿಕ ಬಾಹ್ಯಾಕಾಶ ಮಿಶನ್ಗೆ ಸಿದ್ಧರಾಗಿದ್ದಾರೆ. ಭಾರತದ ಬಾಹ್ಯಾಕಾಶದ ಕನಸುಗಳು ಎತ್ತರಕ್ಕೇರುತ್ತಿವೆ’’ ಎಂದು ಕೇಂದ್ರ ಮಾಹಿತಿ ಹಾಹೂ ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ 40 ವರ್ಷದ ಶುಕ್ಲಾ ಅವರು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಹಾಗೂ ಖಾಸಗಿ ಬಾಹ್ಯಾಕಾಶ ಸಂಸ್ಥೆ ಆ್ಯಕ್ಸಿಯೊಮ್ ಸ್ಪೇನ್ ನಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಶುಕ್ಲಾ ಅವರು ಅಮೆರಿದ ಖಾಸಗಿ ವಾಣಿಜ್ಯ ಬಾಹ್ಯಾಕಾಶ ಮಿಶನ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ಗೆ ಪ್ರಯಾಣಿಸಲಿದ್ದಾರೆ. ಈ ಯಾತ್ರೆಗಾಗಿ ಭಾರತವು 60 ದಶಲಕ್ಷ ಡಾಲರ್ಗಳನ್ನು ಪಾವತಿಸಿದೆ.
ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ಫಾಲ್ಕನ್ 9 ಉಡಾವಣೆಗೊಳ್ಳಲಿದೆ.







