ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲುಪಾಲಾಗಿ 7 ವರ್ಷ | ಅತ್ಯಾಚಾರಿಗಳು, ಕೊಲೆಗಾರರು ಮುಕ್ತವಾಗಿ ನಡೆದಾಡುತ್ತಿದ್ದಾರೆ: ಶ್ವೇತಾ ಭಟ್

Courtesy: X/ @sanjivbhatt
ಹೊಸದಿಲ್ಲಿ: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಜೈಲುಪಾಲಾಗಿ 7 ವರ್ಷವಾದ ಹಿನ್ನೆಲೆ ಅವರ ಪತ್ನಿ ಶ್ವೇತಾ ಭಟ್ ಅವರು ತಮ್ಮ ಪತಿಯ “ಅಕ್ರಮ” ಬಂಧನಕ್ಕೆ “ಏಳು ವರ್ಷಗಳು ಕಳೆದಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅತ್ಯಾಚಾರಿಗಳು, ಕೊಲೆಗಾರರು ಮುಕ್ತವಾಗಿ ನಡೆದಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಜೀವ್ ಭಟ್ ಅವರನ್ನು ಪ್ರಾಮಾಣಿಕ ಅಧಿಕಾರಿ ಎಂದು ಹೇಳಿದ ಪತ್ನಿ ಶ್ವೇತಾ ಭಟ್, ಅವರು ಸತ್ಯವನ್ನು ಹೇಳುವ ಧೈರ್ಯವನ್ನು ಹೊಂದಿದ್ದಕ್ಕಾಗಿ ತಪ್ಪಾಗಿ ಸೆರೆವಾಸ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಶ್ವೇತಾ ಭಟ್, ನನ್ನ ಪತಿಯ ಏಕೈಕ ಅಪರಾಧ “ಧೈರ್ಯ”. ಆದರೆ ಘೋರ ಅಪರಾಧ ನಡೆಸಿದ ಆರೋಪಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಸತ್ಯ ಹೇಳುವುದೇ ಏಕೈಕ 'ಅಪರಾಧ'ವಾದ್ದರಿಂದ ವ್ಯಕ್ತಿಯಿಂದ ಏಳು ವರ್ಷಗಳನ್ನು ಕದಿಯಲಾಗಿದೆ. ಏಳು ವರ್ಷಗಳಲ್ಲಿ ಅತ್ಯಾಚಾರಿಗಳು, ಕೊಲೆಗಾರರು ಮತ್ತು ಗುಂಪು ಥಳಿತದ ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಆದರೆ ಆತ್ಮಸಾಕ್ಷಿಯ ವ್ಯಕ್ತಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
“ಇದಕ್ಕೆ ಯಾರು ಜವಾಬ್ದಾರರು? ದಾರಿಯನ್ನು ನಿಯಂತ್ರಿಸುವ ಸರ್ವಾಧಿಕಾರಿ ರಾಜಕೀಯ ಜೋಡಿಯೇ? ಅಧಿಕಾರಕ್ಕೆ ಮಣಿಯುವ ನ್ಯಾಯಾಂಗವೇ? ಅಥವಾ ಅನ್ಯಾಯ ಮೆರೆಯುತ್ತಿರುವಾಗ ಮೌನದಲ್ಲಿ ಸುಖವನ್ನು ಆರಿಸಿಕೊಂಡ ಮೂಕ ಪ್ರೇಕ್ಷಕರೇ?” ಎಂದು ಪ್ರಶ್ನಿಸಿದ್ದಾರೆ.
ಕುಟುಂಬವು “ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸುತ್ತದೆ” ಎಂದು ಶ್ವೇತಾ ಹೇಳಿದರು. ನಾಗರಿಕರು ಈ ಹೋರಾಟಕ್ಕೆ ಸೇರಲು ಧೈರ್ಯವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಏಳು ವರ್ಷಗಳಿಂದ ಸಂಜೀವ್ ಭಟ್ ಅಧಿಕಾರದ ಅತ್ಯಂತ ಕರಾಳ ಶಕ್ತಿಗಳ ವಿರುದ್ಧ ಧೈರ್ಯದಿಂದ, ಏಕಾಂಗಿಯಾಗಿ ಹೋರಾಡುತ್ತಿದ್ದಾರೆ. ಒಬ್ಬ ಫ್ಯಾಸಿಸ್ಟ್ನ ಅಹಂಕಾರ ಭಾರತದ ಆತ್ಮಕ್ಕಿಂತ ದೊಡ್ಡದಾದದ್ದು ಯಾವಾಗ? ಎಂದು ಅವರು ಪ್ರಶ್ನಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಸಂಜೀವ್ ಭಟ್, ಜಾಮ್ ನಗರದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ 1990ರಲ್ಲಿ ನಡೆದ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಜಾಂಜೋಧಪುರ ಪಟ್ಟಣದಲ್ಲಿ ನಡೆದ ಕೋಮು ಗಲಭೆಯ ಸಂದರ್ಭದಲ್ಲಿ ಸಂಜೀವ್ ಭಟ್ ಅವರು ಕಠಿಣ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ನಿಗ್ರಹ) ಕಾಯ್ದೆ (TADA) ಅಡಿಯಲ್ಲಿ ಸುಮಾರು 133 ಜನರನ್ನು ಬಂಧಿಸಿದ್ದರು. ಬಂಧಿತರಲ್ಲಿ ಓರ್ವನಾದ ಪ್ರಭುದಾಸ್ ವೈಷ್ಣಾನಿ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಮೃತಪಟ್ಟಿದ್ದ. ಪ್ರಭುದಾಸ್ ಸಹೋದರ ಅಮೃತಲಾಲ್ ವೈಷ್ಣಾನಿ ಎಂಬಾತ ಸಂಜೀವ್ ಭಟ್ ಸೇರಿದಂತೆ ಏಳು ಪೊಲೀಸರ ವಿರುದ್ಧ ಕಸ್ಟಡಿ ಸಾವಿನ ಪ್ರಕರಣ ದಾಖಲಿಸಿದ್ದ.







