‘ಕಾಶ್ಮೀರ್ ಟೈಮ್ಸ್’ ಪತ್ರಿಕಾ ಕಚೇರಿಯ ಮೇಲೆ ಎಸ್ಐಎ ದಾಳಿ | ಬೆದರಿಸಲು ಈ ಕ್ರಮ ಎಂದು ಆರೋಪಿಸಿದ ಪತ್ರಿಕಾ ಸಂಪಾದಕ

Photo Credit ; PTI
ಶ್ರೀನಗರ: ಗುರುವಾರ ‘ಕಾಶ್ಮೀರ್ ಟೈಮ್ಸ್’ ಪತ್ರಿಕೆಯ ಜಮ್ಮು ಕಚೇರಿಯ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ರಾಜ್ಯ ತನಿಖಾ ದಳ ದಾಳಿ ನಡೆಸಿದೆ. ಇದರ ಬೆನ್ನಿಗೇ, “ಪತ್ರಿಕೆಯನ್ನು ಬೆದರಿಸಲು ಹಾಗೂ ಮೌನವಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಪತ್ರಿಕೆಯ ಸಂಪಾದಕರು ಆರೋಪಿಸಿದ್ದಾರೆ.
ಈ ದಾಳಿಯ ನಂತರ, ಪತ್ರಿಕೆಯ ಕಾರ್ಯಕಾರಿ ಸಂಪಾದಕಿ ಅನುರಾಧ ಭಾಸಿನ್ ವಿರುದ್ಧ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ಹಾಗೂ ದೇಶದ ವಿರುದ್ಧ ಅಸಮಾಧಾನ ಹರಡುತ್ತಿರುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
“ಪತ್ರಿಕೆಯು ವಿಭಜನೆಯನ್ನು ವಿಜೃಂಭಿಸುತ್ತಿದೆ ಹಾಗೂ ಭಾರತ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಸಾರ್ವಭೌಮತೆ ಹಾಗೂ ಭೌಗೋಳಿಕ ಐಕ್ಯತೆಗೆ ಧಕ್ಕೆ ತರುತ್ತಿದೆ” ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ. ಈ ಶೋಧ ಕಾರ್ಯಾಚರಣೆಯ ವೇಳೆ ರಾಜ್ಯ ತನಿಖಾ ದಳದ ಅಧಿಕಾರಿಗಳು ಪತ್ರಿಕೆಯ ಕಚೇರಿಯಿಂದ ಎಕೆ-47 ಕಾರ್ಟ್ರಿಜ್ ಗಳು, ಪಿಸ್ತೂಲ್ ಗುಂಡುಗಳು ಹಾಗೂ ಮೂರು ಗ್ರೆನೇಡ್ ಲಿವರ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗುರುವಾರ ಬೆಳಗ್ಗೆ ಪತ್ರಿಕಾ ಕಚೇರಿಯನ್ನು ಪ್ರವೇಶಿಸಿದ ರಾಜ್ಯ ತನಿಖಾ ದಳ, ಹಲವಾರು ಗಂಟೆಗಳ ಕಾಲ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ, ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ಚಟುವಟಿಕೆಗಳೊಂದಿಗೆ ಅನುರಾಧ ಭಾಸಿನ್ ಹೊಂದಿರುವ ಸಂಪರ್ಕಗಳನ್ನು ತನಿಖೆಗೊಳಪಡಿಸಲು ಕಚೇರಿಯಲ್ಲಿನ ದಾಖಲೆಗಳು, ಕಂಪ್ಯೂಟರ್ ಗಳು ಹಾಗೂ ಡಿಜಿಟಲ್ ಸಾಧನಗಳನ್ನು ಪರೀಕ್ಷೆಗೊಳಪಡಿಸಿತು ಎಂದು ಮೂಲಗಳು ತಿಳಿಸಿವೆ.







