5 ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ: ಡಾ.ಜಿ. ಪರಮೇಶ್ವರ್

ಗೃಹ ಸಚಿವ ಡಾ.ಜಿ. ಪರಮೇಶ್ವರ್
ಬೆಂಗಳೂರು: ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆಂದು ನಾವೆಲ್ಲ ಭಾವಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ದೀರ್ಘಾವಧಿಯ ಸಿಎಂ ಆಗಲೆಂದು ನಾನು ಹಾರೈಸುತ್ತೇನೆ. ಸಿದ್ದರಾಮಯ್ಯ ದಾಖಲೆ ಮಾಡಬೇಕು. ಈ ಐದು ವರ್ಷ ಆಡಳಿತ ಪೂರ್ಣಗೊಳಿಸಿದರೆ ಸಹಜವಾಗಿ ಅದು ದಾಖಲೆ ಆಗಲಿದೆ ಎಂದರು.
ಉದಯಗಿರಿ ಗಲಭೆ ಪ್ರಕರಣವಾಗಿ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಹತ್ತು ಆರೋಪಿಗಳ ಬಂಧನ ಆಗಿದೆ. ಸಿಸಿಟಿವಿಯಲ್ಲಿ ಪರಿಶೀಲಿಸಿ ಕಲ್ಲು ಹೊಡೆದವರು ಯಾರೆಂದು ಪತ್ತೆ ಹಚ್ಚಿ ವಶಕ್ಕೆ ಪಡೆದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅಶೋಕ್ ಸುಳ್ಳು ಹೇಳುವುದು ಬೇಡ..!
ಅಧಿಕಾರಿಗಳ ದೌರ್ಜನ್ಯ ಖಂಡಿಸಿ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಅಧಿಕಾರಿಗಳ ವಿರುದ್ಧ ದೌರ್ಜನ್ಯ ಆಗಿದ್ದರೆ ಸಾಬೀತುಪಡಿಸಲಿ. ಆದರೆ, ಸುಳ್ಳು ಹೇಳಿ, ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.





