ಪಶ್ಚಿಮ ಬಂಗಾಳ: ಸಚಿವ ಸಿದ್ದೀಕ್ ಚೌಧುರಿ ಬೆಂಗಾವಲು ವಾಹನದ ಮೇಲೆ ಗುಂಪಿನಿಂದ ದಾಳಿ

ಸಿದ್ದೀಕ್ ಚೌಧುರಿ | PC : ANI
ಕೋಲ್ಕತಾ: ಪಶ್ಚಿಮಬಂಗಾಳದ ಸಚಿವ ಹಾಗೂ ಜಮೀಯತ್ ಉಲೆಮಾ ಏ ಹಿಂದ್ನ ಅಧ್ಯಕ್ಷ ಸಿದ್ದೀಕ್ ಚೌಧುರಿ ಅವರ ಬೆಂಗಾವಲು ವಾಹನದ ಮೇಲೆ ಪೂರ್ಬ ಬರ್ಧಮಾನ್ ಜಿಲ್ಲೆಯಲ್ಲಿ ಗುರುವಾರ ಗುಂಪೊಂದು ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಸಿದ್ದೀಕ್ ಚೌಧುರಿ ಅವರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.
ಟಿಎಂಸಿಯ ಒಂದು ಬಣದ ಕಾರ್ಯಕರ್ತರು ಸ್ಥಳೀಯ ಪಂಚಾಯತ್ ಪ್ರಧಾನ್ನ ನೇತೃತ್ವದಲ್ಲಿ ತನ್ನ ಮೇಲೆ ದಾಳಿಗೆ ಪ್ರಯತ್ನಿಸಿತು. ತನ್ನ ವಾಹನದ ಮೇಲೆ ಕಲ್ಲು ತೂರಾಟ ನಡೆಸಿತು. ಇದರಿಂದ ಕಾರಿನ ಗಾಜು ಒಡೆದು, ತನ್ನ ಕೈಗೆ ಗಾಯವಾಗಿದೆ ಎಂದು ಸಿದ್ದೀಕ್ ಚೌಧುರಿ ಆರೋಪಿಸಿದ್ದಾರೆ.
‘‘ಸ್ಥಳೀಯ ಪಂಚಾಯತ್ ಪ್ರಧಾನ ರಫೀಕುಲ್ ಇಸ್ಲಾಂ ಶೇಖ್ ಮತ್ತು ಅವರ ಬೆಂಬಲಿಗರು ನನ್ನ ಮೇಲೆ ಈ ದಾಳಿ ನಡೆಸಿದ್ದಾರೆ. ಆದರೆ, ಸ್ಥಳೀಯ ಉಸ್ತುವಾರಿ ಇನ್ಸ್ಪೆಕ್ಟರ್ ದಾಳಿಕೋರರನ್ನು ಚದುರಿಸಲು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ನನ್ನೊಂದಿಗಿದ್ದ ಭದ್ರತಾ ಸಿಬ್ಬಂದಿ ಮಾತ್ರ ನನ್ನನ್ನು ರಕ್ಷಿಸಿದರು’’ ಎಂದು ಚೌಧುರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದೀಕ್ ಚೌಧುರಿ ಅವರು ಆಗ್ರಹಿಸಿದ್ದಾರೆ.





