ಕಾರ್ಮಿಕ ವಲಯದಲ್ಲಿ ಮಹತ್ವದ ಸುಧಾರಣೆ | 4 ಕಾರ್ಮಿಕ ಸಂಹಿತೆಗಳ ಜಾರಿ

Photo Credit : PTI
ಹೊಸದಿಲ್ಲಿ,ನ.21: ಕೇಂದ್ರ ಸರಕಾರವು ಶುಕ್ರವಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಶುಕ್ರವಾರ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಭಾರತ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು - ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆ 2020 - ಇವುಗಳನ್ನು 2025ರ ನವೆಂಬರ್ 21 ರಿಂದ ಜಾರಿಗೆ ಬರುವಂತೆ ಘೋಷಿಸಿದೆ.
ಇದೊಂದು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿರುವ ಕೇಂದ್ರ ಸರಕಾರವು, ಹಾಲಿ ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಈ ಮೂಲಕ ಏಕರೂಪಗೊಳಿಸಲಾಗಿದೆ. ಶತಮಾನಗಳಷ್ಟು ಹಳೆಯದಾದ ಕಾರ್ಮಿಕ ಕಾನೂನುಗಳ ಕಾರ್ಯಚೌಕಟ್ಟನ್ನು ಇವು ಸರಳಗೊಳಿಸಿದೆ ಹಾಗೂ ಕೋಟ್ಯಂತರ ಕಾರ್ಮಿಕರಿಗೆ ಉದ್ಯೋಗ ಸಂರಕ್ಷಣೆಯನ್ನು ಇದು ವಿಸ್ತರಿಸಿದೆ. 2025ರ 21ರ ನವೆಂಬರ್ನಿಂದ ಇದು ಅನುಷ್ಠಾನಕ್ಕೆ ಬರಲಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘‘ ಶ್ರಮ ಏವ ಜಯತೇ! ಇಂದು ನಮ್ಮ ಸರಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅನುಷ್ಠಾನಗೊಳಿಸಿದೆ. ಸ್ವಾತಂತ್ರ್ಯಾನಂತರ ಇದು ಅತ್ಯಂತ ಸಮಗ್ರ ಹಾಗೂ ಪ್ರಗತಿಪರವಾದ ಕಾರ್ಮಿಕ ಕೇಂದ್ರೀತ ಸುಧಾರಣಾ ಕ್ರಮಗಳಾಗಿವೆ. ಇದು ನಮ್ಮ ಕಾರ್ಮಿಕರನ್ನು ಮಹೋನ್ನತವಾಗಿ ಸಬಲೀಕರಣಗೊಳಿಸುತ್ತದೆ. ಇದು ಅನುಸರಣಾ ವಿಧಾನಗಳನ್ನು ಸರಳೀಕೃತಗೊಳಿಸುತ್ತದೆ ಹಾಗೂ ‘ ಸುಲಲಿತ ಉದ್ಯಮ ನಿರ್ವಹಣೆ’ಯನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.
ಈ ಸಂಹಿತೆಗಳು, ಸಾರ್ವತ್ರಿಕ ಸಾಮಾಜಿಕ ಭದ್ರತೆ, ವೇತನಗಳ ಕನಿಷ್ಠ ಹಾಗೂ ಸಕಾಲಿಕ ಪಾವತಿಗೆ ಬಲವಾದ ಅಡಿಪಾಯವನ್ನು ಹಾಕಲಿದೆ. ಸುರಕ್ಷಿತ ಕೆಲಸದ ಸ್ಥಳಗಳನ್ನು ಸೃಷ್ಟಿಸಲಿದೆ ಹಾಗೂ ನಾರಿಶಕ್ತಿ ಮತ್ತು ಯುವಶಕ್ತಿಗೆ ವ್ಯಾಪಕ ಅವಕಾಶಗಳನ್ನು ತೆರೆಯಲಿದೆ ಹಾಗೂ ವಿಕಸಿತ ಭಾರತದೆಡೆಗೆ ನಮ್ಮ ಪಯಣಕ್ಕೆ ವೇಗೋತ್ಕರ್ಷವನ್ನು ನೀಡಲಿದೆ ’’ ಎಂದು ಹೇಳಿದ್ದಾರೆ.
►ಸಂಹಿತೆಗಳ ಮುಖ್ಯಾಂಶಗಳು
♦ ಎಲ್ಲಾ ಕಾರ್ಮಿಕರಿಗೆ ನೇಮಕಾತಿ ಪತ್ರ ನೀಡುವುದು ಕಡ್ಡಾಯವಾಗಿದೆ.
♦ ಉದ್ಯೋಗದಾತರು ನಿಗದಿತ ಕನಿಷ್ಠ ಹಾಗೂ ಸಕಾಲಿಕವಾಗಿ ವೇತನವನ್ನು ನೀಡುವುದು ಕಡ್ಡಾಯವಾಗಿದೆ.
♦ ಉದ್ಯೋಗದಾತರು 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಒದಗಿಸಬೇಕು.
♦ ಎಲ್ಲಾ ಕಾರ್ಮಿಕರಿಗೆ ಪಿಎಫ್, ಇಎಸ್ಐಸಿ, ವಿಮೆ ಮತ್ತು ಇತರ ಸಾಮಾಜಿಕ ಭದ್ರತಾ ಪ್ರಯೋಜನಗಳು ದೊರಕಲಿವೆ.
♦ ಎಲ್ಲಾ ಮಹಿಳೆಯರಿಗೆ ಗಣಿಗಾರಿಕೆ ಸೇರಿದಂತೆ ಎಲ್ಲಾ ರೀತಿಯ ಉದ್ಯೋಗಗಳಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅನುಮತಿ. ಮಹಿಳಾ ಕಾರ್ಮಿಕರಿಗೆ ಸಮಾನ ಅವಕಾಶಗಳ ಜೊತೆಗೆ ಸಮಾನ ವೇತನ.
♦ ಅಪಾಯಕಾರಿ ಕೆಲಸಗಳಲ್ಲಿ ದುಡಿಯುವವರಿಗೆ ಶೇ.100ರಷ್ಟು ಆರೋಗ್ಯ ಭದ್ರತೆ
♦ ಇ.ಎಸ್.ಐ.ಸಿ ವ್ಯಾಪ್ತಿ ಮತ್ತು ಪ್ರಯೋಜನಗಳನ್ನು ದೇಶಾದ್ಯಂತ ವಿಸ್ತರಿಸಲಾಗಿದೆ
♦ ನಿಶ್ಚಿತ ಅವಧಿಯ ಅಥವಾ ಗುತ್ತಿಗೆ ಕೆಲಸಗಾರರು (ಎಫ್.ಟಿ.ಇ): ರಜೆ, ವೈದ್ಯಕೀಯ ಮತ್ತು ಸಾಮಾಜಿಕ ಭದ್ರತೆ, ಗ್ರಾಚ್ಯುಟಿ ಸೇರಿದಂತೆ ಕಾಯಂ ಕಾರ್ಮಿಕರಿಗೆ ಸಮಾನವಾದ ಎಲ್ಲಾ ಪ್ರಯೋಜನಗಳನ್ನು ಎಫ್.ಟಿ.ಇ ಗಳು ಪಡೆಯಲಿದ್ದಾರೆ.
♦ ಕಿರುಕುಳ, ತಾರತಮ್ಯ ಮತ್ತು ವೇತನ ಸಂಬಂಧಿತ ವಿವಾದಗಳ ಸಕಾಲಿಕ ಪರಿಹಾರ.
♦ ಸ್ವಿಗಿ, ರೊಮಾಟೊ, ಬ್ಲಿಂಕಿಟ್ ನಂತಹ ಪ್ಲ್ಯಾಟ್ ಫಾರ್ಮ್ ಗಳ ಕಾರ್ಮಿಕರು ಕೂಡಾು ಅಧಿಕೃತ ಉದ್ಯೋಗ ಕ್ಷೇತ್ರದ ವ್ಯಾಪ್ತಿಗೆ ಬರುತ್ತಾರೆ. ಮಾಲಕಸಂಸ್ಥೆಗಳು ಈ ಕಾರ್ಮಿಕರಿಗಾಗಿ ಕಲ್ಯಾಣ ನಿಧಿಗಳನ್ನು ಸ್ಥಾಪಿಸಬೇಕಾಗುತ್ತದೆ ಹಾಗೂ ತಮ್ಮ ಉದ್ಯಮದ ವಹಿವಾಟಿನ (ಟರ್ನೊವರ್)ನ ಶೇ.1.2ರಷ್ಟು ಈ ನಿಧಿಗೆ ಹಾಕಬೇಕಾಗುತ್ತದೆ.







