ಚಿನಿವಾರ ಪೇಟೆ | ಚಿನ್ನದೊಂದಿಗೆ ಜಿಗಿದ ಬೆಳ್ಳಿಯ ಬೆಲೆ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಹಬ್ಬದ ಋತುವಿನಲ್ಲಿ ವರ್ತಕರಿಂದ ಭಾರಿ ಬೇಡಿಕೆ ಸೃಷ್ಟಿಯಾಗಿರುವುದರಿಂದ, ಶುಕ್ರವಾರ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ ದಾಖಲೆಯ 1,41,900 ರೂ.ಗೆ ಏರಿಕೆ ಕಂಡಿತು. ಇದೇ ವೇಳೆ, ಪ್ರತಿ 10 ಗ್ರಾಂ ಚಿನ್ನದ ದರ 330 ರೂ. ಏರಿಕೆ ದಾಖಲಿಸಿತು ಎಂದು ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ತಿಳಿಸಿದೆ.
ಚಿನ್ನದ ದರ ಮತ್ತೆ ಏರಿಕೆ ಕಂಡಿದ್ದು, ಶೇ. 99.9 ಪರಿಶುದ್ಧತೆಯ ಚಿನ್ನದ ದರ ಪ್ರತಿ 10 ಗ್ರಾಂಗೆ 330 ರೂ. ಏರಿಕೆಯಾಗಿ, 1,17,700 ರೂ.ಗೆ ತಲುಪಿತು. ಇದಕ್ಕೂ ಮುನ್ನ, ಗುರುವಾರದಂದು ಚಿನ್ನದ ವಹಿವಾಟು ಪ್ರತಿ 10 ಗ್ರಾಂಗೆ 1,17,370 ರೂ.ಗೆ ಅಂತ್ಯಗೊಂಡಿತ್ತು.
ಸ್ಥಳೀಯ ಚಿನಿವಾರ ಪೇಟೆಯಲ್ಲಿ ಶೇ. 99.5 ಪರಿಶುದ್ಧತೆಯ ಚಿನ್ನದ ದರ ಪ್ರತಿ 10 ಗ್ರಾಂಗೆ 400 ರೂ. (ಎಲ್ಲ ತೆರಿಗೆಗಳೂ ಸೇರಿದಂತೆ) 1,17,100 ರೂ. ತಲುಪಿತು. ಇದಕ್ಕೂ ಮುನ್ನ, ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 1,16,700 ರೂ.ಗೆ ಮುಕ್ತಾಯಗೊಂಡಿತ್ತು.
ಗುರುವಾರ ಪ್ರತಿ ಕೆಜಿಗೆ ದಾಖಲೆಯ 1,40,000 ರೂ.ಗೆ ತಲುಪಿದ್ದ ಬೆಳ್ಳಿಯ ದರ, ಶುಕ್ರವಾರ ಕೂಡಾ ತನ್ನ ನಾಗಾಲೋಟ ಮುಂದುವರಿಸಿ ಮತ್ತೆ ಪ್ರತಿ ಕೆಜಿಗೆ 1,900 ರೂ. ಏರಿಕೆ ಕಂಡಿತು. ಹಬ್ಬದ ಬೇಡಿಕೆ ಹಾಗೂ ಹೂಡಿಕೆದಾರರ ದೃಢ ಆಸಕ್ತಿಯಿಂದಾಗಿ ಈ ಏರಿಕೆ ಕಂಡು ಬಂದಿದೆ ಎಂದು ಆಲ್ ಇಂಡಿಯಾ ಸರಾಫ ಅಸೋಸಿಯೇಷನ್ ಮಾಹಿತಿ ನೀಡಿದೆ.







