ಸರ್ವ ಪುರುಷರ CRPF ತುಕಡಿಯ ನೇತೃತ್ವ ವಹಿಸಿದ ಮಹಿಳಾ ಅಧಿಕಾರಿ ಸಿಮ್ರಾನ್ ಬಾಲಾ

ಸಿಮ್ರಾನ್ ಬಾಲಾ | Photo Credit ; X
ಹೊಸದಿಲ್ಲಿ, ಜ. 26: ಇಲ್ಲಿನ ಕರ್ತವ್ಯ ಪಥದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಿಆರ್ಪಿಎಫ್ನ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರು ಸರ್ವ ಪುರುಷರ ಸಿಆರ್ಪಿಎಫ್ ತುಕಡಿಯ ನೇತೃತ್ವ ವಹಿಸುವ ಮೂಲಕ ಚರಿತ್ರೆ ಸೃಷ್ಟಿಸಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಹಳ್ಳಿಯವರಾದ 26 ವರ್ಷದ ಅಧಿಕಾರಿ ಸಿಮ್ರಾನ್ ಬಾಲಾ ಅವರು, ದೇಶದ ಅತಿ ದೊಡ್ಡ ಅರೆಸೇನಾ ಪಡೆಯಾಗಿರುವ ಸಿಆರ್ಪಿಎಫ್ನ 147 ಸಿಬ್ಬಂದಿಯ ತುಕಡಿಯ ನೇತೃತ್ವ ವಹಿಸಿದ್ದಾರೆ.
ಕರ್ತವ್ಯ ಪಥದಲ್ಲಿ ಸಿಆರ್ಪಿಎಫ್ನ ಬ್ಯಾಂಡ್ ತಂಡ ಬಾರಿಸಿದ ಹಾಡು ‘ದೇಶ್ ಕೆ ಹಮ್ ಹೆ ರಕ್ಷಕ್’ ಗೆ ಅನುಗುಣವಾಗಿ ತುಕಡಿ ಸಾಗಿತು.
ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ವಿವಿಧ ತುಕಡಿಗಳಿಗೆ ಮಹಿಳಾ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿಗಳು ನೇತೃತ್ವ ವಹಿಸಿರುವ ಹಲವು ನಿದರ್ಶನಗಳಿವೆ. ಆದರೆ, ವಾರ್ಷಿಕ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಸರ್ವ ಪುರುಷರನ್ನು ಒಳಗೊಂಡ ತುಕಡಿಯನ್ನು ಮಹಿಳಾ ಅಧಿಕಾರಿಯೇ ಮುನ್ನಡೆಸಿರುವುದು ಇದೇ ಮೊದಲು.
ಜಮ್ಮು ಹಾಗೂ ಕಾಶ್ಮೀರದ ರಾಜೌರಿಯವರಾದ ಬಾಲಾ ಅವರು ಒಂದು ವರ್ಷದ ಹಿಂದೆ ಸಿಆರ್ಪಿಎಫ್ಗೆ ಸೇರಿದ್ದರು. ದೇಶದ ಅತಿ ದೊಡ್ಡ ಅರೆಸೇನಾ ಪಡೆಯ ಅಧಿಕಾರಿ ಶ್ರೇಣಿಯ ಹುದ್ದೆಗೆ ಸೇರಿದ ಜಿಲ್ಲೆಯ ಮೊದಲ ಮಹಿಳೆ ಬಾಲಾ.
ಅವರ ಗ್ರಾಮ ನೌಶೇರಾ ಭಾರತ–ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಿಂದ ಕೇವಲ 11 ಕಿ.ಮೀ. ದೂರದಲ್ಲಿದೆ. ಈ ಪ್ರದೇಶ ಗಡಿಯಾಚೆಗಿನ ಶೆಲ್ ದಾಳಿಗಳ ಹಲವು ನಿದರ್ಶನಗಳಿಗೆ ಸಾಕ್ಷಿಯಾಗಿದೆ.
“ಗಣರಾಜ್ಯೋತ್ಸವ ಪಥಸಂಚಲನದಲ್ಲಿ ತುಕಡಿಯ ನೇತೃತ್ವ ವಹಿಸುವ ಅವಕಾಶ ದೊರಕಿರುವುದು ನನಗೆ ನಿಜವಾಗಿಯೂ ಹೆಮ್ಮೆಯ ವಿಚಾರ. ನನಗೆ ಈ ಅವಕಾಶ ನೀಡಿದ ಸಿಆರ್ಪಿಎಫ್ಗೆ ಗೌರವ ಸಲ್ಲಿಸುತ್ತೇನೆ” ಎಂದು ಅಭ್ಯಾಸದ ವೇಳೆ ಸಿಮ್ರಾನ್ ಬಾಲಾ ಹೇಳಿದ್ದಾರೆ.







