ಎಸ್ಐಆರ್ ಆತಂಕಕಾರಿ, ಅದು ಸಾಮೂಹಿಕ ಮತದಾನ ಹಕ್ಕು ವಂಚನೆ, ಮತಗಳ್ಳತನಕ್ಕೆ ಕಾರಣವಾಗಲಿದೆ: ಸಿಪಿಐ(ಎಂಎಲ್)

ದೀಪಂಕರ್ ಭಟ್ಟಾಚಾರ್ಯ (Photo: PTI)
ಹೊಸದಿಲ್ಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು(ಎಸ್ಐಆರ್) ಭಾರತದ ಚುನಾವಣಾ ಸಂಪ್ರದಾಯಗಳಿಂದ ಸಂಪೂರ್ಣವಾಗಿ ದೂರಸರಿದಿದೆ ಎಂದು ಬಣ್ಣಿಸಿರುವ ಸಿಪಿಐ(ಎಂಎಲ್) ಲಿಬರೇಷನ್, ಅದು ಸಾಮೂಹಿಕ ಮತದಾನ ಹಕ್ಕು ನಿರಾಕರಣೆ ಮತ್ತು ಮತಗಳ್ಳತನದ ಬೆದರಿಕೆಯೊಡ್ಡಿದೆ ಎಂದು ಹೇಳಿದೆ. ಸಿಪಿಐ(ಎಂಎಲ್)ಲಿಬರೇಷನ್ ಬಿಹಾರದಲ್ಲಿ ಮಹಾಮೈತ್ರಿಯ ಘಟಕವಾಗಿದೆ.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಿಪಿಐ(ಎಂಎಲ್) ಲಿಬರೇಷನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರು, ಎಸ್ಐಆರ್ ನ್ನು ನೋಟು ರದ್ದತಿಯಂತಹ ವಿಚ್ಛಿದ್ರಕಾರಿ ಪ್ರಕ್ರಿಯೆಗೆ ಹೋಲಿಸಿದರು. ಅದನ್ನು ‘ಯೂನಿವರ್ಸಲ್ ಅಡಲ್ಟ್ ಫ್ರಾಂಚೈಸಿ (ಸಾರ್ವತ್ರಿಕ ವಯಸ್ಕ ಮತದಾನ ಹಕ್ಕು)’ಯ ತತ್ವವನ್ನು ಹಾಳುಗೆಡವಲು ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದರು.
ಪೌರತ್ವವನ್ನು ನಿರ್ಣಯಿಸಲು ಚುನಾವಣಾ ಆಯೋಗವು ಸಕ್ಷಮ ಸಂಸ್ಥೆಯಲ್ಲ. ಆದರೂ ಭಾರತೀಯ ಪ್ರಜಾಪ್ರಭುತ್ವದ ೭೫ ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ತಮ್ಮ ಪೌರತ್ವವನ್ನು ಸಾಬೀತುಗೊಳಿಸುವಂತೆ ಜನರಿಗೆ ಸೂಚಿಸುತ್ತಿದೆ. ಇದು ಹಿಂದೆಂದೂ ನಡೆದಿರಲಿಲ್ಲ. ಚುನಾವಣಾ ಆಯೋಗದ ನಿರ್ಧಾರವು ಸ್ಥಾಪಿತ ಚುನಾವಣಾ ಕಾರ್ಯವಿಧಾನಗಳಿಂದ ಸಂಪೂರ್ಣವಾಗಿ ವಿಮುಖವಾಗಿದೆ ಮತ್ತು ಯೂನಿವರ್ಸಲ್ ಅಡಲ್ಟ್ ಫ್ರಾಂಚೈಸಿಯನ್ನು ಉಲ್ಲಂಘಿಸಿದೆ ಎಂದು ಹೇಳಿದರು.
ಸಿಪಿಐ(ಎಂಎಲ್) ಲಿಬರೇಷನ್ ಮತ್ತು ಮಹಾಘಠಬಂಧನ್ನ ಇತರ ಘಟಕ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಬಿಹಾರದಲ್ಲಿ ಎಸ್ಐಆರ್ ನಡೆಯುತ್ತಿದೆ.
ಎಸ್ಐಆರ್ ಅನ್ನು ಘೋಷಿಸಿದಾಗ ಭಾರೀ ಪ್ರಮಾಣದಲ್ಲಿ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕವನ್ನು ತನ್ನ ಪಕ್ಷವು ವ್ಯಕ್ತಪಡಿಸಿತ್ತು ಮತ್ತು ಇದರಿಂದ ಎರಡು ಕೋಟಿ ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ಅಂದಾಜಿಸಿತ್ತು ಎಂದು ಹೇಳಿದ ಭಟ್ಟಾಚಾರ್ಯ, ‘ನಂತರದ ಬೆಳವಣಿಗೆಗಳು ನಾವು ಹೇಳಿದ್ದು ಸರಿ ಎನ್ನುವುದನ್ನು ಸಾಬೀತುಗೊಳಿಸಿವೆ. ಈಗಾಗಲೇ ಮತದಾರರ ಪಟ್ಟಿಗಳಿಂದ 65 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಮತ್ತು ಮೂರು ಲಕ್ಷಕ್ಕೂ ಅಧಿಕ ಮತದಾರರಿಗೆ ನೋಟಿಸ್ಗಳನ್ನು ಜಾರಿಗೊಳಿಸಲಾಗಿದೆ. ಇದು ಕಾಲ್ಪನಿಕ ಅಪಾಯವಲ್ಲ, ವಾಸ್ತವದಲ್ಲಿ ನಡೆಯುತ್ತಿರುವ ಅಪಾಯವಾಗಿದೆ ’ ಎಂದರು.
ಗಮನಾರ್ಹವೆಂದರೆ ಮತದಾರರ ಪಟ್ಟಿಗಳಿಂದ ಕೈಬಿಡಲಾಗಿರುವವರಲ್ಲಿ ಒಬ್ಬನೇ ಒಬ್ಬ ‘ವಿದೇಶಿ ನುಸುಳುಕೋರ’ ಇಲ್ಲ. ಆ.18ರ ವೇಳೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಚುನಾವಣಾ ಆಯೋಗವು ಮತದಾರರ ಪಟ್ಟಿಗಳಿಂದ ಅಳಿಸಲಾದ ಹೆಸರುಗಳನ್ನು ಹಂಚಿಕೊಂಡಾಗ ಅವುಗಳಲ್ಲಿ ಒಬ್ಬನೇ ಒಬ್ಬ ಬಾಂಗ್ಲಾದೇಶಿ,ನೇಪಾಳಿ ಅಥವಾ ಮ್ಯಾನ್ಮಾರಿನವರು ಇರಲಿಲ್ಲ ಎನ್ನುವುದು ಸ್ಪಷ್ಟವಾಗಿತ್ತು. ನುಸುಳುಕೋರರ ಕುರಿತು ಬಿಜೆಪಿಯ ಪ್ರಚಾರವು ತಳ ಕಚ್ಚಿದೆ ಎಂದು ಭಟ್ಟಾಚಾರ್ಯ ಆರೋಪಿಸಿದರು.







