SIR ಅವಾಂತರ | ವೀರಚಕ್ರ ಪುರಸ್ಕೃತ ನಿವೃತ್ತ ವಾಯುಪಡೆ ಅಧಿಕಾರಿಗೂ ಗುರುತು ದೃಢಪಡಿಸಲು ಅಧಿಕಾರಿಗಳ ಬುಲಾವ್

Photo Credit ; PTI
ಹೊಸದಿಲ್ಲಿ, ಜ.11: ಒಂದು ವೇಳೆ ಮತದಾರಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗೊಂದಲಗಳು ಉಂಟಾಗಿರುವ ಹಲವು ಪ್ರಕರಣಗಳು ವರದಿಯಾಗಿರುವ ನಡುವೆ, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಮತ್ತು ಅವರ ಪತ್ನಿ ಕೂಡ ತೊಂದರೆಗೆ ಸಿಲುಕಿರುವ ಘಟನೆ ಗೋವಾದಲ್ಲಿ ವರದಿಯಾಗಿದೆ.
SIRನ ಭಾಗವಾಗಿ ಗುರುತನ್ನು ಸಾಬೀತುಪಡಿಸಲು ತಮ್ಮನ್ನು ಭೇಟಿ ಮಾಡಲು ನೌಕಾಪಡೆಯ ನಿವೃತ್ತ ಅಧಿಕಾರಿ ಆಡ್ಮಿರಲ್ ಅರುಣ್ ಪ್ರಕಾಶ್ ಅವರನ್ನು ಚುನಾವಣಾ ಆಯೋಗದ ಅಧಿಕಾರಿಗಳು ಕೇಳಿಕೊಂಡಿದ್ದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
‘‘ಒಂದು ವೇಳೆ SIR ಫಾರಂಗಳಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲವಾದರೆ ಅವುಗಳನ್ನು ಮರುಪರಿಷ್ಕರಿಸುವ ಅಗತ್ಯವಿದೆ. SIR ನಿಮಿತ್ತ ಬಿಎಲ್ಓಗಳು ನಮ್ಮನ್ನು ಮೂರು ಸಲ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಯನ್ನು ಕೇಳಬಹುದಿತ್ತು. ಆದರೆ 82 ಹಾಗೂ 78 ವರ್ಷ ಪ್ರಾಯದ ದಂಪತಿಯನ್ನು 18 ಕಿ.ಮೀ ದೂರದ ಸ್ಥಳಕ್ಕೆ ಎರಡು ವಿಭಿನ್ನ ದಿನಾಂಕಗಳಲ್ಲಿ ತೆರಳಲು ಸೂಚಿಸಲಾಗಿದೆ’’ ಎಂದು ಆಡ್ಮಿರಲ್ ಪ್ರಕಾಶ್ ಅವರು ತಮ್ಮ X ಬಳಕೆದಾರ ಖಾತೆಯಲ್ಲಿ ಹೇಳಿದ್ದಾರೆ.
ವೀರಚಕ್ರ ಪುರಸ್ಕೃತ ಸೇನಾಧಿಕಾರಿ ಆದರೂ ತಮ್ಮ ಗುರುತನ್ನು SIR ನಲ್ಲಿ ದೃಢಪಡಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಆಯೋಗವನ್ನು ಟೀಕಿಸುವ ಪೋಸ್ಟುಗಳು ಹರಿದಾಡುತ್ತಿದ್ದವು. ಕೆಲವು ಜನರು ಆಯೋಗವು ಬಿಎಲ್ಓ ಅಧಿಕಾರಿಯನ್ನು ಅವರ ನಿವಾಸಕ್ಕೆ ಕಳುಹಿಸಬೇಕೆಂದು ಸಲಹೆ ನೀಡಿದ್ದರು.
ಆದರೆ ಪ್ರಕಾಶ್ ಅವರು ಯಾವುದೇ ವಿಶೇಷ ಸೌಲಭ್ಯಗಳಿಗೆ ಬೇಡಿಕೆ ಸಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
‘‘20 ವರ್ಷದ ಹಿಂದೆ ನಿವೃತ್ತರಾದ ನಂತರದಿಂದ ನಾನು ಯಾವುದೇ ವಿಶೇಷ ಸೌಲಭ್ಯವನ್ನು ಕೇಳಿಲ್ಲ. ನನ್ನ ಪತ್ನಿ ಮತ್ತು ನಾನು SIR ಫಾರಂಗಳನ್ನು ಭರ್ತಿ ಮಾಡಿದ್ದೇವೆ. 2026ರ ಗೋವಾ ಮತದಾರರ ಕರಡು ಪಟ್ಟಿಯಲ್ಲಿ ನಮ್ಮ ಹೆಸರುಗಳು ಇದ್ದರೆ ಸಂತೋಷವಾಗುತ್ತದೆ. ಆದಾಗ್ಯೂ, ಚುನಾವಣಾ ಆಯೋಗ ನೀಡಿರುವ ನೋಟಿಸ್ ಗೆ ನಾವು ಬದ್ಧರಾಗಿದ್ದೇವೆ’’ ಎಂದು ಆಡ್ಮಿರಲ್ ಪ್ರಕಾಶ್ ಅವರು Xನಲ್ಲಿ ಹೇಳಿದ್ದಾರೆ.
►ವೀರಚಕ್ರ ಪುರಸ್ಕೃತ ಸೇನಾನಿ
40 ವರ್ಷಗಳ ಸೇವಾ ಅವಧಿಯಲ್ಲಿ ಪ್ರಕಾಶ್ ಅವರು ಸರಕು ಸಾಗಣೆ ಫೈಟರ್ ಸ್ಕ್ವಾಡ್ರನ್ ನೇತೃತ್ವವನ್ನು ವಹಿಸಿದ್ದರು. ಅವರು ನೌಕಾಪಡೆಯ ವಾಯುನಿಲ್ದಾಣ ಮತ್ತು ವಿಮಾನವಾಹಕ ಸಮರ ನೌಕೆ ಐಎನ್ಎಸ್ ವಿರಾಟ್ ಸೇರಿದಂತೆ ನಾಲ್ಕು ಸಮರ ನೌಕೆಗಳನ್ನು ನಿರ್ವಹಿಸಿದ್ದರು.
1971ರ ಭಾರತ-ಪಾಕ್ ಯುದ್ಧದಲ್ಲಿ ಪಂಜಾಬ್ನಲ್ಲಿ ಭಾರತೀಯ ವಾಯುಪಡೆಯ ಫೈಟರ್ ವಿಮಾನಗಳ ಸ್ಕ್ವಾಡ್ರನ್ನೊಂದಿಗೆ ಹಾರಾಟ ನಡೆಸಿದ್ದಕ್ಕಾಗಿ ಪ್ರಕಾಶ್ ಅವರಿಗೆ ವೀರಚಕ್ರ ಪ್ರದಾನ ಮಾಡಲಾಗಿತ್ತು.







