ಕೋಲ್ಕತಾ | ಎಸ್ಐಆರ್ ಕೆಲಸ ಆಗಲ್ಲ: ಸಿಇಒ ಕಚೇರಿಯಲ್ಲಿ ಬಿಎಲ್ಒಗಳ ಆಹೋರಾತ್ರಿ ಧರಣಿ

Photo Credit : PTI
ಕೋಲ್ಕತಾ, ನ. 25: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ‘‘ನಿಭಾಯಿಸಲಾಗದ ಕೆಲಸದ ಒತ್ತಡ’’ವನ್ನು ಪ್ರತಿಭಟಿಸಿ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್ಒ)ಗಳು ಸೋಮವಾರ ರಾತ್ರಿಯಿಡೀ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಲ್ಲಿ ಕಳೆದಿದ್ದಾರೆ. ತಮ್ಮನ್ನು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಭೇಟಿಯಾಗಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸ್ವೀಕರಿಸಿದ ಬಳಿಕವಷ್ಟೇ ತಾವು ಅಲ್ಲಿಂದ ಹೊರ ಹೋಗುವುದಾಗಿ ಅವರು ಘೋಷಿಸಿದ್ದಾರೆ.
ಅವರ ಪೈಕಿ ಹೆಚ್ಚಿನವರು ಸೋಮವಾರ ಸಂಜೆಯಿಂದಲೇ ಅಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸುತ್ತಿದ್ದರು. ಅದಕ್ಕೂ ಮುನ್ನ ಅವರು ಉತ್ತರ ಕೋಲ್ಕತದ ಕಾಲೇಜು ಚೌಕದಿಂದ ಮಧ್ಯ ಕೋಲ್ಕತದ ಬಿಬಿಡಿ ಬಾಗ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಬಿಡಿ ಬಾಗ್ ನಲ್ಲಿ ಮುಖ್ಯ ಚುನಾವಣಾಧಿಕಾರಿಯ ಕಚೇರಿಯಿದೆ.
ಇತ್ತೀಚೆಗೆ ಸ್ಥಾಪನೆಯಾದ ಬಿಎಲ್ಒ ಅಧಿಕಾರ್ ರಕ್ಷಾ ಸಮಿತಿಯ ಸದಸ್ಯರು ಸೋಮವಾರ ಮಧ್ಯಾಹ್ನ ಮುಖ್ಯ ಚುನಾವಣಾಧಿಕಾರಿಯ ಕಚೇರಿ ಎದುರು ಧರಣಿ ಆರಂಭಿಸಿದರು. ಅದು ಮಂಗಳವಾರ ಬೆಳಗ್ಗಿನವರೆಗೂ ಮುಂದುವರಿಯಿತು. ತಮ್ಮ ಮನವಿಯನ್ನು ಅಗರ್ವಾಲ್ ಸ್ವತಃ ಬಂದು ಸ್ವೀಕರಿಸುವವರೆಗೆ ಧರಣಿಯನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.
ಮತಗಟ್ಟೆಯ ವಿಶೇಷ ತೀವ್ರ ಪರಿಷ್ಕರಣೆಯಡಿ ತಮ್ಮ ಮೇಲೆ ‘‘ಅತ್ಯಧಿಕ ಹಾಗೂ ಅಮಾನವೀಯ ಕೆಲಸದ ಒತ್ತಡ’’ವನ್ನು ಹೇರಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸುದೀರ್ಘ ಬಿಕ್ಕಟ್ಟಿನ ಬಳಿಕ, ಮನವಿ ಸಲ್ಲಿಸುವುದಕ್ಕಾಗಿ ಕಚೇರಿಯ ಒಳಗೆ ಹೋಗಲು 13 ಸದಸ್ಯರ ನಿಯೋಗಕ್ಕೆ ಪೊಲೀಸರು ಅವಕಾಶ ನೀಡಿದರು. ಆದರೆ, ತಮ್ಮ ಮನವಿಯನ್ನು ಸ್ವೀಕರಿಸಲು ಸ್ವತಃ ಅಗರ್ವಾಲ್ ಬರಬೇಕು ಎಂದು ಆಗ್ರಹಿಸಿ ಅವರ ಚೇಂಬರ್ ಹೊರಗೆ ನಿಯೋಗದ ಸದಸ್ಯರು ಸಂಜೆ 4:30ರ ವೇಳೆಗೆ ಧರಣಿ ಕುಳಿತರು.
ರಾತ್ರಿಯ ವೇಳೆಗೆ, ಏಳು ಸದಸ್ಯರು ಕಚೇರಿಯ ಒಳಗೆ ಉಳಿದರು. ಆದರೆ, ಅವರ ಮನವಿ ಸ್ವೀಕರಿಸಲು ಅಗರ್ವಾಲ್ ಬರಲಿಲ್ಲ. ಸೋಮವಾರ ರಾತ್ರಿ 11:30ರ ಹೊತ್ತಿಗೆ ಅವರು ಪೊಲೀಸ್ ಭದ್ರತೆಯಲ್ಲಿ ಕಚೇರಿಯಿಂದ ಹೊರಗೆ ಹೋದರು. ಆದರೆ, ಪ್ರತಿಭಟನಾಕಾರರು ರಾತ್ರಿಯಿಡೀ ಕಚೇರಿಯೊಳಗೇ ಉಳಿದರು.
ಮಂಗಳವಾರವೂ ಅವರ ಧರಣಿ ಮುಂದುವರಿದಿದೆ.
ಇತ್ತೀಚಿನ ವಾರಗಳಲ್ಲಿ ಕನಿಷ್ಠ ಮೂವರು ಬಿಎಲ್ಒಗಳು ‘‘ಕೆಲಸದ ಒತ್ತಡವನ್ನು ನಿಭಾಯಿಸಲಾಗದೆ’’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.







