ಗುಜರಾತಿನ ವನತಾರಾ ವನ್ಯಜೀವಿ ಕೇಂದ್ರಕ್ಕೆ ಕ್ಲೀನ್ ಚಿಟ್ ನೀಡಿದ SIT

Photo : PTI
ಹೊಸದಿಲ್ಲಿ,ಸೆ.15: ಗುಜರಾತಿನ ಜಾಮನಗರದಲ್ಲಿರುವ ರಿಲಯನ್ಸ್ ಒಡೆತನದ ವನತಾರಾ ಪ್ರಾಣಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರದ ಕಾರ್ಯ ನಿರ್ವಹಣೆ ಕುರಿತು ತನಿಖೆ ನಡೆಸಲು ಸವೋಚ್ಚ ನ್ಯಾಯಾಲಯವು ರಚಿಸಿದ್ದ ವಿಶೇಷ ತನಿಖಾ ತಂಡವು(ಸಿಟ್) ಕಳೆದ ವಾರ ತನ್ನ ವರದಿಯನ್ನು ಸಲ್ಲಿಸಿದ್ದು, ಪ್ರಾಣಿಗಳ ಸ್ವಾಧೀನದಲ್ಲಿ ಯಾವುದೇ ಅಕ್ರಮಗಳು ಕಂಡುಬಂದಿಲ್ಲ ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ಚೆಲಮೇಶ್ವರ ನೇತೃತ್ವದ ಸಿಟ್ ತನ್ನ ವರದಿಯಲ್ಲಿ, ವನತಾರಾ ನಿಯಂತ್ರಕ ಕಾನೂನುಗಳಿಗೆ ಅನುಗುಣವಾಗಿ ಪ್ರಾಣಿಗಳನ್ನು ಪಡೆದುಕೊಂಡಿದೆ ಎಂಬ ತೀರ್ಮಾನಕ್ಕೆ ಬಂದಿದೆ.
ಸೋಮವಾರ ವರದಿಯ ಕೆಲವು ಆಯ್ದ ಭಾಗಗಳನ್ನು ಓದಿದ ನ್ಯಾಯಮೂರ್ತಿಗಳಾದ ಪಂಕಜ ಮಿತ್ತಲ್ ಮತ್ತು ಪಿ.ಬಿ.ವರಾಳೆ ಅವರ ಪೀಠವು,ಸಿಟ್ ವರದಿ ತನಗೆ ತೃಪ್ತಿ ನೀಡಿದೆ ಎಂದು ಹೇಳಿತು.
ವನತಾರಾ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ ಸಾಳ್ವೆಯವರು, ವರದಿಯನ್ನು ದಾಖಲಿಸಿಕೊಳ್ಳುವಂತೆ ಮತ್ತು ಈ ವಿವಾದಕ್ಕೆ ಶಾಶ್ವತ ಅಂತ್ಯವನ್ನು ಹಾಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ‘ಕೆಲವು ವಾಣಿಜ್ಯಿಕ ಗೋಪ್ಯತೆಗಳಿದ್ದು ಅವುಗಳನ್ನು ಕಾಯ್ದುಕೊಳ್ಳಬೇಕಿದೆ. ವನತಾರಾ ವಿಶ್ವದಲ್ಲಿ ತನ್ನ ಮಾದರಿಯ ಏಕೈಕ ಪ್ರಾಣಿ ಸಂರಕ್ಷಣಾ ಕೇಂದ್ರವಾಗಿದೆ. ನಾಳೆ ನ್ಯೂಯಾರ್ಕ್ ಟೈಮ್ಸ್ ಮತ್ತು ಇತರ ಪತ್ರಿಕೆಗಳಲ್ಲಿ ವರದಿಗಳು ಕಾಣಿಸಿಕೊಳ್ಳುವುದನ್ನು ನಾವು ಬಯಸುವುದಿಲ್ಲ. ಈ ವಿವಾದಕ್ಕೆ ಶಾಶ್ವತ ಅಂತ್ಯ ಹಾಡಬೇಕಿದೆ ’ಎಂದು ಅವರು ಹೇಳಿದರು.
ಅವರ ಮಾತಿಗೆ ತಲೆದೂಗಿದ ಪೀಠವು‘ನಾವು ದೇಶದ ಹೆಮ್ಮೆ ಎಂದು ಭಾವಿಸುವ ಕೆಲವು ವಿಷಯಗಳಿವೆ. ನಾವು ಅನಗತ್ಯವಾಗಿ ಈ ವಿಷಯಗಳನ್ನು ಎತ್ತಬಾರದು ಮತ್ತು ಗದ್ದಲವನ್ನು ಸೃಷ್ಟಿಸಬಾರದು. ಈ ದೇಶದಲ್ಲಿ ಕೆಲವು ವಿಷಯಗಳು ನಡೆಯಲು ನಾವು ಅವಕಾಶ ನೀಡಬೇಕು. ಈ ಪ್ರಶ್ನೆಗಳನ್ನು ಮತ್ತೆ ಮತ್ತೆ ಎತ್ತಲು ನಾವು ಯಾರಿಗೂ ಅನುಮತಿಸುವುದಿಲ್ಲ’ ಎಂದು ತಿಳಿಸಿತು.
ಯಾವುದೇ ಪುರಾವೆಗಳು ದೃಢೀಕರಿಸದ, ಆದರೆ ಪತ್ರಿಕಾ ವರದಿಗಳನ್ನು ಆಧರಿಸಿದ್ದ ವನತಾರಾ ವಿರುದ್ಧದ ಹಲವು ಆರೋಪಗಳನ್ನು ಬೆಟ್ಟು ಮಾಡಿ ವಕೀಲರಾದ ಸಿ.ಆರ್.ಜಿಯಾ ಸುಕಿನ್ ಮತ್ತು ದೇವ ಶರ್ಮಾ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ವಿಚಾರಣೆಗಾಗಿ ಸ್ವೀಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ತನಿಖೆಗಾಗಿ ಸಿಟ್ ರಚಿಸಿತ್ತು.







