ಕೇರಳ | ಹಿಜಾಬ್ ಧರಿಸಿ ಶಾಲೆ ಪ್ರವೇಶಕ್ಕೆ ನಿರ್ಬಂಧಿಸಿದ ವಿದ್ಯಾರ್ಥಿನಿಗೆ ನೆರವು ನೀಡಲು ಸರಕಾರ ಸಿದ್ದ: ಶಿವನ್ ಕುಟ್ಟಿ

ಶಿವನ್ ಕುಟ್ಟಿ | Photo Credit : PTI
ತಿರುವನಂತಪುರ, ಅ. 18: ಕೊಚ್ಚಿಯಲ್ಲಿ ಚರ್ಚ್ ನಡೆಸುವ ಖಾಸಗಿ ಶಾಲೆಯಲ್ಲಿ ಹಿಜಾಬ್ ಧರಿಸದಂತೆ ನಿರ್ಬಂಧಕ್ಕೆ ಒಳಗಾದ ಮುಸ್ಲಿಂ ವಿದ್ಯಾರ್ಥಿನಿಗೆ ನೆರವು ನೀಡಲು ಸರಕಾರ ಸಿದ್ಧವಾಗಿದೆ ಎಂದು ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಶನಿವಾರ ಹೇಳಿದ್ದಾರೆ.
ಈ ವಿದ್ಯಾರ್ಥಿನಿ ಬೇರೆ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರಳು. ಆಕೆಗೆ ಅಲ್ಲಿ ಪ್ರವೇಶ ಪಡೆಯಲು ಸರಕಾರ ನೆರವು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿನಿ ಮನವಿಯೊಂದಿಗೆ ಸರಕಾರವನ್ನು ಸಂಪರ್ಕಿಸಿದರೆ, ವಿಶೇಷ ಆದೇಶ ನೀಡಲಾಗುವುದು ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತಾನು ತನ್ನ ಪುತ್ರಿಯನ್ನು ಬೇರೆ ಶಾಲೆಗೆ ಸೇರಿಸಲು ಬಯಸುವುದಾಗಿ ವಿದ್ಯಾರ್ಥಿನಿಯ ತಂದೆ ಹೇಳಿದ ದಿನದ ಬಳಿಕ ಸಚಿವರು ಈ ಘೋಷಣೆ ಮಾಡಿದ್ದಾರೆ.
‘‘ವಿದ್ಯಾರ್ಥಿನಿಗೆ ಆಸಕ್ತಿ ಇದ್ದರೆ ಹಾಗೂ ಆಕೆ ಸರಕಾರವನ್ನು ಸಂಪರ್ಕಿಸಿದರೆ, ವಿಶೇಷ ಆದೇಶದ ಮೂಲಕ ಆಕೆ ಸೇರಲು ಬಯಸುವ ಯಾವುದೇ ಶಾಲೆಯಲ್ಲಿ ದಾಖಲಾತಿ ಪಡೆಯಲು ಕ್ರಮ ಕೈಗೊಳ್ಳಲಿದ್ದೇವೆ’’ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದ ಸಂಪ್ರದಾಯದ ಪ್ರಕಾರ, ಯಾವುದೇ ವಿದ್ಯಾರ್ಥಿ ಪ್ರವೇಶ ಸಿಗಲಿಲ್ಲ ಎಂಬ ಕಾರಣಕ್ಕೆ ಶಿಕ್ಷಣ ಪಡೆಯುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಶಿವನ್ ಕುಟ್ಟಿ ತಿಳಿಸಿದ್ದಾರೆ.
ಈ ಘಟನೆ ವಿದ್ಯಾರ್ಥಿನಿಗೆ ನೋವುಂಟು ಮಾಡಿದೆ. ಅವಳು ಅನುಭವಿಸುವ ಯಾವುದೇ ಮಾನಸಿಕ ಒತ್ತಡಕ್ಕೆ ಸಂತ ರೀಟಾ ಆಡಳಿತ ಮಂಡಳಿಯೇ ಜವಾಬ್ದಾರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ನಾವು ಆಕೆಯನ್ನು ಮತ್ತೆ ಅದೇ ಶಾಲೆಗೆ ಕಳುಹಿಸುವುದಿಲ್ಲ ಎಂದು 9ನೇ ತರಗತಿ ವಿದ್ಯಾರ್ಥಿನಿಯ ತಂದೆ ತಿಳಿಸಿದ್ದಾರೆ.
‘‘ಹಿಜಾಬ್ ಘಟನೆಯ ಬಳಿಕ ನನ್ನ ಪುತ್ರಿ ತೀವ್ರ ಒತ್ತಡದಲ್ಲಿದ್ದಾಳೆ. ತಾನು ಶಾಲೆಗೆ ಹಿಂದಿರುಗಲು ಬಯಸುವುದಿಲ್ಲ ಎಂದು ಆಕೆ ಸ್ಪಷ್ಟವಾಗಿ ಹೇಳಿದ್ದಾಳೆ. ಆದುದರಿಂದ ನಾವು ಆಕೆಯ ಇಚ್ಛೆಯನ್ನು ಗೌರವಿಸಲು ನಿರ್ಧರಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.







