ಐ ಆರ್ ಬಿ ಶಿಬಿರದಿಂದ ಶಸ್ತ್ರಾಸ್ತ್ರ ಲೂಟಿಗೈದ 6 ಆರೋಪಿಗಳ ಬಂಧನ

ಇಂಫಾಲ: ಮಣಿಪುರದ ಪೂರ್ವ ಇಂಫಾಲ ಜಿಲ್ಲೆಯ ಚಿಂಗಾರೆಲ್ನ ಭಾರತೀಯ ಮೀಸಲು ಬೆಟಾಲಿಯನ್ ಶಿಬಿರ (ಐ ಆರ್ ಬಿ)ದಿಂದ ಶಸ್ತ್ರಾಸ್ತ್ರಗಳನ್ನು ಲೂಟಿಗೈದ ಆರೋಪದಲ್ಲಿ ಮಣಿಪುರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಇನ್ಸಾಸ್ ರೈಫಲ್ ಗಳು, ಒಂದು ಎ.ಕೆ.ಘಾತಕ್, ಎರಡು ಎಸ್ಎಲ್ಆರ್ ಕಾಡತೂಸುಗಳು ಹಾಗೂ 9ಎಂಎಂ ಪಿಸ್ತೂಲ್ ನ ಮದ್ದುಗುಂಡುಗಳ ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷದ ಫೆಬ್ರವರಿ 13ರಂದು ಗುಂಪೊಂದು ಚಿಂಗಾರೆಲ್ ನಲ್ಲಿರುವ 5ನೇ ಐ ಆರ್ ಬಿ ಶಿಬಿರಕ್ಕೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ದೋಚಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರು ಮಂದಿ ಆರೋಪಿ ಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮಣಿಪುರ ಪೊಲೀಸ್ ಇಲಾಖೆ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್ ನಲ್ಲಿ ತಿಳಿಸಿದೆ.
ಶಸ್ತ್ರಸಜ್ಜಿತ ದುಷ್ಕರ್ಮಿಗಳು ಪಾಂಗೈನಲ್ಲಿರುವ ಮಣಿಪುರ ಪೊಲೀಸ್ ತರಬೇತಿ ಕಾಲೇಜಿಗೆ ನುಗ್ಗಲು ಯತ್ನಿಸಿದ್ದು, ಅವರನ್ನು ಹಿಮ್ಮೆಟ್ಟಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ, ಘಟನೆ ಯಲ್ಲಿ ಒಬ್ಬಾತ ಗಾಯಗೊಂಡು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.





