ಉತ್ತರಾಖಂಡ | ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದರೆಂದು ಶಿಕ್ಷಕನಿಗೇ ಗುಂಡು ಹೊಡೆದ ವಿದ್ಯಾರ್ಥಿ

PC : NDTV
ಡೆಹ್ರಾಡೂನ್: ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದರೆಂದು ಕುಪಿತಗೊಂಡ ವಿದ್ಯಾರ್ಥಿಯೊಬ್ಬ, ತನ್ನ ಶಿಕ್ಷಕನಿಗೇ ಗುಂಡು ಹೊಡೆದಿರುವ ಆಘಾತಕಾರಿ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ ನಡೆದಿದೆ.
ಗಗನ್ ದೀಪ್ ಸಿಂಗ್ ಕೊಹ್ಲಿ ತನ್ನ ವಿದ್ಯಾರ್ಥಿಯಿಂದಲೇ ಗುಂಡಿನ ದಾಳಿಗೆ ಗುರಿಯಾದ ಶಿಕ್ಷಕ ಎಂದು ಗುರುತಿಸಲಾಗಿದೆ.
ಕಳೆದ ವಾರ ಭೌತಶಾಸ್ತ್ರದ ಶಿಕ್ಷಕರಾದ ಗಗನ್ ದೀಪ್ ಸಿಂಗ್ ಕೊಹ್ಲಿ ತಮ್ಮ ವಿದ್ಯಾರ್ಥಿಯೊಬ್ಬನಿಗೆ ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಕುಪಿತಗೊಂಡಿದ್ದ ಆತ ಬುಧವಾರದಂದು ತನ್ನ ಟಿಫಿನ್ ಬಾಕ್ಸ್ ನಲ್ಲಿ ಗನ್ ತೆಗೆದುಕೊಂಡು ಬಂದಿದ್ದು, ತನ್ನ ಶಿಕ್ಷಕನಿಗೆ ಹಿಂಬದಿಯಿಂದ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಗುರುನಾನಕ್ ಶಾಲೆಯಲ್ಲಿ ನಡೆದಿದ್ದು, ಶಿಕ್ಷಕನ ಹಿಂಬದಿಯಿಂದ ನುಗ್ಗಿರುವ ಬಂದೂಕಿನ ಗುಂಡು, ಅವರ ಕುತ್ತಿಗೆಯಲ್ಲಿ ಸಿಲುಕಿಕೊಂಡಿದೆ. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಗಿದ್ದು, ಅವರಿಗೆ ತುರ್ತು ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಲಾಗಿದೆ. ಶಿಕ್ಷಕರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ಡಾ. ಮಯಾಂಕ್ ಅಗರ್ವಾಲ್, ಗುಂಡನ್ನು ಅವರ ದೇಹದಿಂದ ಯಶಸ್ವಿಯಾಗಿ ಹೊರ ತೆಗೆಯಲಾಗಿದೆ ಎಂದು ದೃಢಪಡಿಸಿದ್ದಾರೆ. ಶಿಕ್ಷಕ ಗಗನ್ ದೀಪ್ ಸಿಂಗ್ ಕೊಹ್ಲಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಹೆಚ್ಚಿನ ನಿಗಾವಣೆಗಾಗಿ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಗುಂಡು ಹಾರಿಸಿದ ವಿದ್ಯಾರ್ಥಿಯನ್ನು ಸಮರ್ಥ್ ಬಾಜ್ವಾ ಎಂದು ಗುರುತಿಸಲಾಗಿದ್ದು, ಆತ ತನ್ನ ಟಿಫಿನ್ ಬಾಕ್ಸ್ ನಲ್ಲಿ ಗನ್ ಅನ್ನು ಬಚ್ಚಿಟ್ಟುಕೊಂಡು ತರಗತಿಗೆ ತಂದಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪ್ರಾಪ್ತ ಬಾಲಕನಿಗೆ ಶಸ್ತ್ರಾಸ್ತ್ರ ದೊರಕಿದ್ದು ಹೇಗೆ ಎಂಬ ಕುರಿತೂ ತನಿಖೆ ಕೈಗೊಂಡಿದ್ದಾರೆ. ವಿದ್ಯಾರ್ಥಿಯಿಂದ ಪಿಸ್ತೂಲ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.







