ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ; ಮದುವೆಯ ಕಾರ್ಯಕ್ರಮ ಮುಂದೂಡಿಕೆ

Photo:sports.ndtv
ಸಾಂಗ್ಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಅವರ ವಿವಾಹ ಸಮಾರಂಭಕ್ಕೆ ಮುನ್ನ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸ್ಮೃತಿ–ಪಲಾಶ್ ಮುಚ್ಚಲ್ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸ್ಯಾಮ್ಡೋಲ್ನಲ್ಲಿರುವ ಮಂದಾನಾ ಫಾರ್ಮ್ಹೌಸ್ನಲ್ಲಿ ಮದುವೆ ಸಿದ್ಧತೆಗಳು ಅಂತಿಮ ಹಂತದಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಸ್ವಸ್ಥರಾದ ಶ್ರೀನಿವಾಸ್ ಮಂಧಾನ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಅವರು ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. “ಯಾವುದೇ ಅಪಾಯವನ್ನು ಎದುರಿಸಬಾರದೆಂದು ತಕ್ಷಣ ಆಂಬ್ಯುಲೆನ್ಸ್ಗೆ ಕರೆ ಮಾಡಲಾಯಿತು. ಈಗ ಸ್ಥಿತಿ ಸ್ಥಿರವಾಗಿದೆ,” ಎಂದು ಸ್ಮೃತಿ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ತಿಳಿಸಿದ್ದಾರೆ.
ಸ್ಮೃತಿ ಅವರು ತಮ್ಮ ತಂದೆಯ ಆರೋಗ್ಯ ಸುಧಾರಣೆಗೇ ಆದ್ಯತೆ ನೀಡಲು ನಿರ್ಧರಿಸಿರುವುದರಿಂದ ಮದುವೆಯನ್ನು ಮುಂದೂಡಲಾಗಿದೆ. ಮದುವೆ ಸ್ಥಳದಲ್ಲಿದ್ದ ಅಲಂಕಾರ ಮತ್ತು ಸಿದ್ಧತೆಗಳನ್ನು ಈಗ ತೆರವುಗೊಳಿಸಲಾಗುತ್ತಿದೆ. ಸ್ಮೃತಿ ಮತ್ತು ಕುಟುಂಬವು ಈ ಸಂದರ್ಭದಲ್ಲಿ ಗೌಪ್ಯತೆಯನ್ನು ಕೋರಿದೆ.
ನವೆಂಬರ್ 23ರಂದು ನಿಕಟ ಬಂಧುಗಳ ಸಮ್ಮುಖದಲ್ಲಿ ಮದುವೆ ನಡೆಯಬೇಕಿತ್ತು. ಮಹಿಳಾ ಕ್ರಿಕೆಟ್ ತಂಡದ ಕೆಲವರು ಸಾಂಗ್ಲಿಗೆ ಆಗಮಿಸಿದ್ದರು. ಕಳೆದ ಕೆಲವು ದಿನಗಳಿಂದ ದಂಪತಿಯ ಪೂರ್ವ ಸಂಭ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದುವು.
ಹಲ್ದಿ, ಮೆಹಂದಿ ಹಾಗೂ ಕುಟುಂಬಗಳ ನಡುವಿನ ಸ್ನೇಹಪರ ಕ್ರಿಕೆಟ್ ಪಂದ್ಯ ಸೇರಿದಂತೆ ಸಡಗರದ ಕಾರ್ಯಕ್ರಮಗಳು ಯೋಜನೆಯಲ್ಲಿದ್ದರೂ, ಉಳಿದ ಎಲ್ಲ ಉತ್ಸವಗಳು ಈಗ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿವೆ.







