ಹಾವು ಕಡಿತದಿಂದ ಮೃತ್ಯು | ಜಗತ್ತಿನಲ್ಲೇ ಭಾರತಕ್ಕೆ ಅಗ್ರ ಸ್ಥಾನ; ವಾರ್ಷಿಕ ಅಂದಾಜು 58,000 ಮೃತ್ಯು: ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಇತ್ತೀಚಿನ ಜಾಗತಿಕ ವರದಿಯೊಂದರ ಪ್ರಕಾರ, ಇಡೀ ವಿಶ್ವದಲ್ಲೇ ಭಾರತದಲ್ಲಿ ಅತ್ಯಧಿಕ ಹಾವು ಕಡಿತದ ಸಾವುಗಳು ಸಂಭವಿಸುತ್ತಿದ್ದು, ವಾರ್ಷಿಕ ಅಂದಾಜು 58,000 ಮೃತ್ಯುಗಳಾಗುತ್ತಿವೆ ಎಂದು ಹೇಳಲಾಗಿದೆ. ಈ ಭಾರಿ ಪ್ರಮಾಣದ ಸಾವುಗಳಿಗೆ ಭಾರತದಲ್ಲಿ ಅಧಿಕ ಪ್ರಮಾಣದ ಹಾವುಗಳಿರುವುದು, ವ್ಯಾಪಕ ಪ್ರಮಾಣದ ಗ್ರಾಮೀಣ ಭಾಗವಿರುವುದು ಹಾಗೂ ಅಧಿಕ ಪ್ರಮಾಣದಲ್ಲಿ ಸಾಂಪ್ರದಾಯಿಕ ವೈದ್ಯರನ್ನು ಅವಲಂಬಿಸಿರುವುದು ಕಾರಣ ಎನ್ನಲಾಗಿದೆ.
ಜಿನಿವಾದಲ್ಲಿ ಹಾವು ಕಡಿತ ಕಾರ್ಯಪಡೆ ಆಯೋಜಿಸಿದ್ದ 78ನೇ ವಿಶ್ವ ಆರೋಗ್ಯ ಅಧಿವೇಶನದಲ್ಲಿ 'Time to bite back: Catalyzing a Global Response to Snakebite Envenoming' ಎಂಬ ವರದಿಯನ್ನು ಬಿಡುಗಡೆಗೊಳಿಸಲಾಯಿತು. The Indian Express ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿರುವ ವರದಿಯ ಪ್ರಕಾರ, ಸಕಾಲಿಕ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳಿಲ್ಲದೆ ಇರುವುದರಿಂದ, ಹಾವು ಕಡಿತದಿಂದ ಬಡವರು ಹಾಗೂ ಆದಿವಾಸಿ ಸಮುದಾಯಗಳ ಜನರೇ ಹೆಚ್ಚು ಅಸಮತೋಲಿತ ತೊಂದರೆಗೀಡಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಅಪಾಯಕಾರಿ ಹಾಗೂ ತಡೆಗಟ್ಟಬಹುದಾದ ಹಾವು ಕಡಿತದಿಂದ ಸಂಭವಿಸುವ ಮರಣ ಪ್ರಮಾಣದ ಕಡೆ ಗಮನ ಹರಿಸಬೇಕಿದೆ ಎಂದು ವರದಿ ಕರೆ ನೀಡಿದ್ದು, ಅದಕ್ಕಾಗಿ ಪ್ರಮುಖ ವ್ಯವಸ್ಥಿತ ವಿಷಯಗಳತ್ತ ಬೆಳಕು ಚೆಲ್ಲಿದೆ. ಸಾಂಪ್ರದಾಯಿಕ ಔಷಧಗಳ ಮೇಲಿನ ಅವಲಂಬನೆಯಿಂದ ವೈದ್ಯಕೀಯ ನೆರವು ಪಡೆಯುವಲ್ಲಿ ವಿಳಂಬವಾಗುತ್ತಿರುವುದು, ಸ್ವದೇಶಿ ವಿಷನಿರೋಧಕ ತಯಾರಕರ ಔಷಧಗಳಲ್ಲಿ ಗುಣಮಟ್ಟ ನಿಯಂತ್ರಣದ ಕೊರತೆ ಹಾಗೂ ಅನೌಪಚಾರಿಕ ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ವಿಷ ನಿರೋಧಕ ಔಷಧಗಳಿಗೆ ದುಬಾರಿ ಬೆಲೆ ಈ ಪ್ರಮಾಣದ ಸಾವುಗಳಿಗೆ ಕಾರಣ ಎಂದು ಹೇಳಿದೆ.
ಭಾರತ ಈಗಾಗಲೇ ಹಾವು ಕಡಿತ ನಿಯಂತ್ರಣ ವಿಷ ನಿರೋಧಕ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರೂ, ಗಮನಾರ್ಹ ಕೊರತೆ ಉಳಿದಿದೆ ಎಂದೂ ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
2030ರ ವೇಳೆಗೆ ಹಾವು ಕಡಿತದಿಂದ ಉಂಟಾಗುವ ಜಾಗತಿಕ ಮಟ್ಟದ ಮೃತ್ಯುಗಳು ಹಾಗೂ ಅಂಗವೈಕಲ್ಯ ಸಮಸ್ಯೆಗಳನ್ನು ಎದುರುಗೊಳ್ಳುವ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯತ್ತ ಸಾಗಲು ಬಲಿಷ್ಠ ಪ್ರಯತ್ನಗಳ ಅಗತ್ಯವಿದೆ ಎಂದೂ ವರದಿಯಲ್ಲಿ ಒತ್ತಾಯಿಸಲಾಗಿದೆ.







