ಆಂಧ್ರದಲ್ಲಿ 16ರೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ? ಮಹತ್ವದ ಸುಳಿವು ನೀಡಿದ ಸಚಿವ ಎನ್.ಲೋಕೇಶ್

ಎನ್.ಲೋಕೇಶ್ | Photo Credit : PTI
ಹೊಸದಿಲ್ಲಿ,ಜ.22: ಆಸ್ಟ್ರೇಲಿಯಾ ಕಳೆದ ತಿಂಗಳು ಜಾರಿಗೊಳಿಸಿರುವ ರೀತಿಯಲ್ಲೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲು ರಾಜ್ಯ ಸರಕಾರವು ಚಿಂತನೆ ನಡೆಸುತ್ತಿದೆ ಎಂಬ ಮಹತ್ವದ ಸುಳಿವನ್ನು ಆಂಧ್ರಪ್ರದೇಶದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ನೀಡಿದ್ದಾರೆ.
ದಾವೋಸ್ನಲ್ಲಿ ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಬ್ಲೂಮ್ಬರ್ಗ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಲೋಕೇಶ್, ನಿರ್ದಿಷ್ಟ ವಯಸ್ಸಿನೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವಿಷಯಗಳನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿರುವುದಿಲ್ಲ. ಮಕ್ಕಳನ್ನು ಇಂತಹ ವೇದಿಕೆಗಳಿಂದ ದೂರವಿಡಲು ಬಲವಾದ ಕಾನೂನು ಚೌಕಟ್ಟು ಅಗತ್ಯವಾಗಿದೆ ಎಂದು ಹೇಳಿದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾದ ಅಂಥೋನಿ ಆಲ್ಬಾನೀಸ್ ಸರಕಾರವು ವಿಶ್ವದಲ್ಲಿ ಮೊದಲ ಬಾರಿಗೆ 16 ವರ್ಷದೊಳಗಿನ ಮಕ್ಕಳು ಟಿಕ್ಟಾಕ್, ಎಕ್ಸ್,ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಸ್ನ್ಯಾಪ್ಚಾಟ್ಗಳಂತಹ ಪ್ರಮುಖ ಸಾಮಾಜಿಕ ಮಾಧ್ಯಮ ಸೇವೆಗಳನ್ನು ಬಳಸುವುದನ್ನು ನಿಷೇಧಿಸಿತ್ತು. ಈ ನಿಷೇಧದಡಿ ಮಕ್ಕಳು ಹೊಸ ಖಾತೆಗಳನ್ನು ತೆರೆಯುವಂತಿಲ್ಲ ಮತ್ತು ಅಸ್ತಿತ್ವದಲ್ಲಿರುವ ಪ್ರೊಫೈಲ್ಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.
ಇಂತಹ ಕ್ರಮವನ್ನು ತೆಗೆದುಕೊಳ್ಳುವುದನ್ನು ಸರಕಾರವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಆಂಧ್ರಪ್ರದೇಶದಲ್ಲಿಯ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದು ಅನುಷ್ಠಾನಗೊಂಡರೆ ಆಂಧ್ರಪ್ರದೇಶವು ಮಕ್ಕಳಿಂದ ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ನಿರ್ಬಂಧಿಸಿದ ದೇಶದ ಮೊದಲ ರಾಜ್ಯವಾಗಲಿದೆ.
ಲೋಕೇಶ್ ಅವರನ್ನು ಬೆಂಬಲಿಸಿದ ಟಿಡಿಪಿ ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿಯವರು, ಹಿಂದಿನ ವೈಎಸ್ಆರ್ಸಿಪಿ ಸರಕಾರದ ಅವಧಿಯಲ್ಲಿ ಮಹಿಳೆಯರ ವಿರುದ್ಧ ಕ್ರೂರ ಮತ್ತು ಅವಹೇಳನಕಾರಿ ದಾಳಿಗಳನ್ನು ನಡೆಸಲು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು ಎಂದರು.
ಮಕ್ಕಳು ಆನ್ಲೈನ್ನಲ್ಲಿ ಮುಕ್ತವಾಗಿ ಲಭ್ಯವಾಗುತ್ತಿರುವ ನಕಾರಾತ್ಮಕ ಮತ್ತು ಹಾನಿಕಾರಕ ವಿಷಯಗಳನ್ನು ಗ್ರಹಿಸಲು ಭಾವನಾತ್ಮಕವಾಗಿ ಪ್ರಬುದ್ಧರಾಗಿರುವುದಿಲ್ಲ. ಇದನ್ನು ಸರಕಾರದ ಕಣ್ಗಾವಲು ಎಂದು ಅರ್ಥೈಸಬೇಕಿಲ್ಲ. ಇದು ಮಕ್ಕಳನ್ನು ಹಾನಿಕಾರಕ ವಿಷಯ ಮತ್ತು ಆನ್ಲೈನ್ ನಕಾರಾತ್ಮಕತೆಯಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷ ಮದ್ರಾಸ್ ಉಚ್ಚ ನ್ಯಾಯಾಲಯವು ಕೂಡ ಆಸ್ಟ್ರೇಲಿಯಾದಂತಹ ಕಾನೂನನ್ನು ತರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.







