ರಾಜ್ಯಸಭಾ ಸ್ಥಾನಕ್ಕಾಗಿ ಕಮಲ್ ಹಾಸನ್ ತಮ್ಮ ಆತ್ಮವನ್ನೇ ಮಾರಿಕೊಂಡಿದ್ದಾರೆ: ಅಣ್ಣಾಮಲೈ

ಕಮಲ್ ಹಾಸನ್, ಅಣ್ಣಾಮಲೈ | Photo Credit : PTI
ಚೆನ್ನೈ: ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ನಟ, ಮಕ್ಕಳ್ ನೀದಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ನಡೆಯನ್ನು ಸೋಮವಾರ ಟೀಕಿಸಿರುವ ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ, ಅವರು ಆಡಳಿತಾರೂಢ ಡಿಎಂಕೆಗೆ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅಣ್ಣಾಮಲೈ, "ರಾಜ್ಯಸಭಾ ಸ್ಥಾನಕ್ಕಾಗಿ ಅವರು ಬಹಳ ಹಿಂದೆಯೇ ತಮ್ಮ ಆತ್ಮವನ್ನು ಮಾರಿಕೊಂಡಿದ್ದಾರೆ. ಕಮಲ್ ಹಾಸನ್ ಏನೇ ಮಾತನಾಡಿದರೂ, ತಮಿಳುನಾಡಿನ ಜನತೆ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕರೂರಿಗೆ ತೆರಳಿ, ಸರಕಾರದ ಯಾವುದೇ ತಪ್ಪಿಲ್ಲ ಎಂದು ಹೇಳಿದರೆ, ಅದನ್ನು ಯಾರು ಒಪ್ಪಿಕೊಳ್ಳುತ್ತಾರೆ" ಎಂದು ಕಮಲ್ ಹಾಸನ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಕಮಲ್ ಹಾಸನ್ ಒಳ್ಳೆಯ ನಟ, ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಅವರು ಏನೆಲ್ಲ ಹೇಳುತ್ತಾರೆ, ಅದು ಒಮ್ಮುಖವಾಗಿದೆ ಹಾಗೂ ಡಿಎಂಕೆಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ಕರೂರಿನಂತಹ ಘಟನೆಯೂ ಇದಕ್ಕೆ ಹೊರತಲ್ಲ" ಎಂದು ಅವರು ಆರೋಪಿಸಿದ್ದಾರೆ.
ಸೆಪ್ಟೆಂಬರ್ 27ರಂದು ನಟ ಹಾಗೂ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಆಯೋಜಿಸಿದ್ದ ಚುನಾವಣಾ ರ್ಯಾಲಿಯ ವೇಳೆ ಕರೂರಿನಲ್ಲಿ ಸಂಭವಿಸಿದ್ದ ಕಾಲ್ತುಳಿತ ಘಟನೆಯ ಸ್ಥಳಕ್ಕೆ ಕಮಲ್ ಹಾಸನ್ ಭೇಟಿ ನೀಡಿದ್ದರು. ಈ ಕಾಲ್ತುಳಿತ ಘಟನೆಯಲ್ಲಿ 41 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದರು.
ತಮ್ಮ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಮಲ್ ಹಾಸನ್, ಇದೊಂದು ದುರಂತವಾಗಿದ್ದು, ಸಂಘಟಕರು ಘಟನೆಯ ಹೊಣೆ ಹೊರಬೇಕು. ಇದು ರಾಜಕೀಯ ಆರೋಪ-ಪ್ರತ್ಯಾರೋಪ ಮಾಡುವ ಸಮಯವಲ್ಲ. ನಾವು ನ್ಯಾಯವನ್ನು ಖಾತರಿಪಡಿಸಲು ಹಾಗೂ ಸಂತಾಪವನ್ನು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇವೆ" ಎಂದು ಹೇಳಿದ್ದರು.
ಈ ವೇಳೆ ಪೊಲೀಸರನ್ನೂ ಸಮರ್ಥಿಸಿಕೊಂಡಿದ್ದ ಕಮಲ್ ಹಾಸನ್, "ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದು, ಅವರನ್ನು ಟೀಕಿಸಬಾರದು. ಮುಖ್ಯಮಂತ್ರಿಗಳು ಗೌರವದಿಂದ ವರ್ತಿಸಿದ್ದು, ಅವರು ಅಭಿನಂದನೆಗಳಿಗೆ ಅರ್ಹರಾಗಿದ್ದಾರೆ" ಎಂದು ತಿಳಿಸಿದ್ದರು.







