ಸೋನಮ್ ವಾಂಗ್ಚುಕ್ ಬಂಧನದ ಬಳಿಕ ಗೃಹ ಸಚಿವಾಲಯ-ಲಡಾಖ್ ನಾಯಕರ ನಡುವೆ ಪೂರ್ವ ಸಿದ್ಧತಾ ಸಭೆ ಮರುನಿಗದಿ

ಸೋನಮ್ ವಾಂಗ್ಚುಕ್ | PC : PTI
ಶ್ರೀನಗರ,ಸೆ.27: ಅ.6ರಂದು ನಡೆಯಲಿರುವ ಪ್ರಮುಖ ಮಾತುಕತೆಗಳಿಗೆ ವೇದಿಕೆ ಸಜ್ಜುಗೊಳಿಸಲು ಲಡಾಖ್ ನಾಯಕರು ಮತ್ತು ಗೃಹ ವ್ಯವಹಾರಗಳ ಸಚಿವಾಲಯದ(ಎಂಎಚ್ಎ) ನಡುವೆ ಉದ್ದೇಶಿತ ಪೂರ್ವಸಿದ್ಧತಾ ಸಭೆಯನ್ನು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಪೋಲಿಸರು ಶುಕ್ರವಾರ ಬಂಧಿಸಿರುವ ಹಿನ್ನೆಲೆಯಲ್ಲಿ ಸೆ.29ಕ್ಕೆ ಮರುನಿಗದಿಗೊಳಿಸಲಾಗಿದೆ.
ಸೆ.27ರಂದು ದಿಲ್ಲಿಯಲ್ಲಿ ನಿಗದಿಯಾಗಿದ್ದ ಎಂಎಚ್ಎ ಮತ್ತು ಏಳು ಸದಸ್ಯರ ಲಡಾಖ್ ನಾಯಕರ ನಿಯೋಗದ ನಡುವೆ ಪೂರ್ವಸಿದ್ಧತಾ ಸಭೆಯನ್ನು ಈಗ ಸೆ.29ಕ್ಕೆ ಮುಂದೂಡಲಾಗಿದೆ ಎಂದು ಲೇಹ್ ಅಪೆಕ್ಸ್ ಬಾಡಿ(ಎಲ್ಎಬಿ)ಯ ಸಹ-ಅಧ್ಯಕ್ಷ ಚೆರಿಂಗ್ ದೋರ್ಜೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪೂರ್ವಸಿದ್ಧತಾ ಸಭೆಯು ಲಡಾಖ್ನಲ್ಲಿಯ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸುವ ಹಾಗೂ ಅ.6ರ ಮಾತುಕತೆಗಳಿಗೆ ಕಾರ್ಯಸೂಚಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.
ಅ.6ರ ಮಾತುಕತೆಗಳು ಲಡಾಖ್ಗೆ ರಾಜ್ಯ ಸ್ಥಾನಮಾನ ಮತ್ತು ಆರನೇ ಪರಿಚ್ಛೇದದಡಿ ಸೇರ್ಪಡೆಗಾಗಿ ತಮ್ಮ ಬೇಡಿಕೆಗಳನ್ನು ಕೇಂದ್ರೀಕರಿಸಬೇಕು ಎಂದು ಎಲ್ಎಬಿ ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್(ಕೆಡಿಎ) ಒತ್ತಿ ಹೇಳಿವೆ.
ಬುಧವಾರ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು 80 ಜನರು ಗಾಯಗೊಂಡ ಬಳಿಕ ಲೇಹ್ನಲ್ಲಿ ಉದ್ವಿಗ್ನತೆ ಹೊಗೆಯಾಡುತ್ತಿದ್ದರೂ ಮೇಲ್ನೋಟಕ್ಕೆ ಶಾಂತಿಯುತವಾಗಿದೆ.
ಲಡಾಖ್ ಪ್ರತಿಭಟನೆಗಳಿಗೆ ವಿದೇಶಿ ಹಣಕಾಸು ನೆರವಿನ ಆರೋಪಗಳನ್ನು ತಳ್ಳಿಹಾಕಿದ ದೋರ್ಜೆ, ಹಿಂಸಾಚಾರದಲ್ಲಿ ವಿದೇಶಿ ಕೈವಾಡವಿತ್ತು ಎಂದು ಲಡಾಖ್ನ ಲೆಫ್ಟಿನಂಟ್ ಗವರ್ನರ್ ಕವಿಂದರ್ ಗುಪ್ತಾ ಮತ್ತು ಇತರರು ಆರೋಪಿಸಿದ್ದಾರೆ. ತಮ್ಮ ಆರೋಪವನ್ನು ಸಮರ್ಥಿಸಿಕೊಳ್ಳಲು ಅವರು ಗಾಯಾಳುಗಳಲ್ಲಿ ಜಮ್ಮುಕಾಶ್ಮೀರದ ದೋಡಾ, ನೇಪಾಳ, ಟಿಬೆಟ್ ಮತ್ತು ಬಿಹಾರದ ಜನರು ಸೇರಿದ್ದಾರೆ ಎಂದು ಹೇಳಿದ್ದಾರೆ. ಈ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ, ಸ್ಥಳದಲ್ಲಿದ್ದು ವೀಕ್ಷಿಸುತ್ತಿದ್ದಾಗ ಗಾಯಗೊಂಡಿದ್ದಾರೆ ಎಂದರು.







