ಬಂಧಿತ ವಾಂಗ್ಚುಕ್ ಪಾಕಿಸ್ತಾನದ ಬೇಹುಗಾರನ ಸಂಪರ್ಕದಲ್ಲಿದ್ದರು: ಲಡಾಖ್ ನ ಉನ್ನತ ಪೊಲೀಸ್ ಅಧಿಕಾರಿ

ಸೋನಂ ವಾಂಗ್ಚುಕ್ | PC : PTI
ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರಿಗೆ ಪಾಕಿಸ್ತಾನದ ಸಂಪರ್ಕವಿದೆ ಎಂದು ಶನಿವಾರ ಹೇಳಿದ ಲಡಾಖ್ ಪೊಲೀಸ್ ಮಹಾ ನಿರ್ದೇಶಕ ಎಸ್.ಡಿ.ಸಿಂಗ್ ಜಮ್ವಾಲ್, ನೆರೆಯ ದೇಶಗಳಿಗೆ ಅವರು ನೀಡಿರುವ ಭೇಟಿಯ ಕುರಿತು ಕಳವಳ ವ್ಯಕ್ತಪಡಿಸಿದರು.
ಶುಕ್ರವಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದ್ದ ಸೋನಂ ವಾಂಗ್ಚುಕ್ ಅವರನ್ನು ರಾಜಸ್ಥಾನದ ಜೋಧಪುರ್ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕ ಜಮ್ವಾಲ್, ವಾಂಗ್ಚುಕ್ ರೊಂದಿಗೆ ಸಂಪರ್ಕದಲ್ಲಿದ್ದ ಪಾಕಿಸ್ತಾನದ ಬೇಹುಗಾರಿಕಾ ಅಧಿಕಾರಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಬಹಿರಂಗಪಡಿಸಿದರು.
“ಇತ್ತೀಚೆಗೆ ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಪಾಕಿಸ್ತಾನದ ಬೇಹುಗಾರಿಕಾ ಅಧಿಕಾರಿಯೊಬ್ಬನನ್ನು ನಾವು ಬಂಧಿಸಿದ್ದೇವೆ. ನಮ್ಮ ಬಳಿ ಇದಕ್ಕೆ ದಾಖಲೆ ಇದೆ. ಸೋನಂ ವಾಂಗ್ಚುಕ್ ಪಾಕಿಸ್ತಾನದಲ್ಲಿನ ಡಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅವರು ಬಾಂಗ್ಲಾದೇಶಕ್ಕೂ ಭೇಟಿ ನೀಡಿದ್ದರು. ಹೀಗಾಗಿ ಅವರ ಬಗ್ಗೆ ದೊಡ್ಡ ಪ್ರಶ್ನೆಯೊಂದು ಮೂಡಿದೆ. ಈ ಕುರಿತು ತನಿಖೆ ನಡೆಸಲಾಗುವುದು” ಎಂದು ಅವರು ಹೇಳಿದರು.
ಸೆಪ್ಟೆಂಬರ್ 24ರಂದು ಲೇಹ್ ನಲ್ಲಿ ನಡೆದ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿ ಹಾಗೂ ಕೆಲವು ವಾಹನಗಳನ್ನು ಜಖಂಗೊಳಿಸಿದ ಹಿಂಸಾಚಾರದ ಘಟನೆಯಲ್ಲಿ ನಾಲ್ವರು ಮೃತಪಟ್ಟು, ಸುಮಾರು 80ಕ್ಕೂ ಹೆಚ್ಚು ಮಂದಿ ಗಾಯಗೊಳ್ಳಲು ವಾಂಗ್ಚುಕ್ ಹಿಂಸೆಗೆ ಪ್ರಚೋದನೆ ನೀಡಿದ್ದು ಕಾರಣ ಎಂದೂ ಅವರು ಆರೋಪಿಸಿದರು.
ಲೇಹ್ ಅಪೆಕ್ಸ್ ಬಾಡಿಯ ಯುವ ಘಟಕ ಕರೆನೀಡಿದ್ದ ಹೋರಾಟವು ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಅನ್ನು ಸಂವಿಧಾನದ ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂಬ ಅಭಿಯಾನದ ಭಾಗವಾಗಿತ್ತು.
ಲೇಹ್ ನಲ್ಲಿ ಹಿಂಸಾಚಾರ ಸಂಭವಿಸಿದ ನಂತರ, ವಾಂಗ್ಚುಕ್ ತಮ್ಮ 15 ದಿನಗಳ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಸ್ಥಗಿತಗೊಳಿಸಿದ್ದರು. ಹಿಂಸಾಚಾರವನ್ನು ತಪ್ಪಿಸುವಂತೆ ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದರು. ಜೆನ್ ಝೀ ಉನ್ಮಾದ ಶಾಂತಿಯುತ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡಿತು ಎಂದು ಅವರು ದೂರಿದ್ದರು.







