ಸೋನಮ್ ವಾಂಗ್ಚುಕ್ ಬಂಧನ| ಸಾಕ್ಷ್ಯವಾಗಿ ನೀಡಿರುವ ವೀಡಿಯೊಗಳಲ್ಲಿ ಅವರೇ ಇಲ್ಲ: ಸುಪ್ರೀಂ ಕೋರ್ಟ್ನಲ್ಲಿ ಪತ್ನಿ ವಾದ

ಸೋನಮ್ ವಾಂಗ್ಚುಕ್ (Photo: PTI)
ಹೊಸದಿಲ್ಲಿ: ಲಡಾಖ್ ಮೂಲದ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೆ ಸಾಕ್ಷ್ಯವಾಗಿಯ ಉಲ್ಲೇಖಿಸಿರುವ ವೀಡಿಯೊಗಳಲ್ಲಿ ವಾಂಗ್ಚುಕ್ ಕಾಣಿಸುವುದಿಲ್ಲ ಎಂದು ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ವಾಂಗ್ಚುಕ್ ಅವರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿಬಿ ವರಾಲೆ ಅವರ ಪೀಠದ ಮುಂದೆ ನಡೆಯಿತು.
ವಾಂಗ್ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಲಡಾಖ್ನಿಂದ ಬಂಧಿಸಲಾಗಿದ್ದು, ಪ್ರಸ್ತುತ ಜೋಧ್ಪುರ ಜೈಲಿನಲ್ಲಿ ಬಂಧನದಲ್ಲಿದ್ದಾರೆ. ಲಡಾಖ್ ಗೆ ರಾಜ್ಯ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗಳ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಗಳು ಮತ್ತು ಹಿಂಸಾಚಾರದ ಹಿನ್ನೆಲೆಯಲ್ಲೇ ಬಂಧನ ನಡೆದಿದೆ ಎಂದು ಸರ್ಕಾರ ಹೇಳಿದೆ.
ಅಕ್ಟೋಬರ್ ಆರಂಭದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ, NSA ಅಡಿಯಲ್ಲಿ ಬಂಧಿಸಿದ್ದು ಕಾನೂನುಬಾಹಿರವಾಗಿದ್ದು, ಶಾಂತಿಯುತ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಉದ್ದೇಶ ಹೊಂದಿದೆ ಎಂದು ಗೀತಾಂಜಲಿ ಆಂಗ್ಮೋ ಆರೋಪಿಸಿದ್ದಾರೆ. ವಾಂಗ್ಚುಕ್ ಸದಾ ಅಹಿಂಸಾತ್ಮಕ ಹಾಗೂ ಗಾಂಧಿವಾದಿ ಮಾರ್ಗಗಳನ್ನು ಅನುಸರಿಸಿದ್ದಾರೆ ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ವಿಚಾರಣೆಯ ವೇಳೆ ಸಿಬಲ್, ಬಂಧನಕ್ಕೆ ಅವಲಂಬಿಸಿರುವ ಪ್ರಮುಖ ದಾಖಲೆಗಳು ಮತ್ತು ವೀಡಿಯೊಗಳನ್ನು ವಾಂಗ್ಚುಕ್ಗೆ ನೀಡಿಲ್ಲ ಎಂದು ಆಕ್ಷೇಪಿಸಿದರು. ಇದರಿಂದ ಸಂವಿಧಾನದ ಕಲಂ 22(1) ಮತ್ತು 22(5) ಅಡಿಯಲ್ಲಿ ಇರುವ ಕಾನೂನು ಪ್ರಾತಿನಿಧ್ಯದ ಹಕ್ಕು ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದರು.
ಬಂಧನ ಆದೇಶದಲ್ಲಿ ಸೆಪ್ಟೆಂಬರ್ 24, 2025ರ ನಾಲ್ಕು ವೀಡಿಯೊಗಳನ್ನು ಆಧಾರವಾಗಿ ಉಲ್ಲೇಖಿಸಲಾಗಿದೆ. ಆದರೆ ಆ ವೀಡಿಯೊಗಳನ್ನು ವಾಂಗ್ಚುಕ್ ಗೆ ನೀಡಲಾಗಿಲ್ಲ. ಅಲ್ಲದೆ, ಆ ವೀಡಿಯೊಗಳಲ್ಲಿ ವಾಂಗ್ಚುಕ್ ಕಾಣಿಸುವುದೇ ಇಲ್ಲ ಎಂದು ಸಿಬಲ್ ಹೇಳಿದರು.
ಎನ್ಎಸ್ಎಯ ಸೆಕ್ಷನ್ 5ಎ ಅನ್ನು ಉಲ್ಲೇಖಿಸಿ, ಒಂದು ಆಧಾರ ಅಮಾನ್ಯವಾದರೂ ಬಂಧನ ಮುಂದುವರಿಯಬಹುದು ಎಂದು ರಾಜ್ಯ ವಾದಿಸಬಹುದು. ಆದರೆ ಬಂಧನಕ್ಕೆ ಅವಲಂಬಿಸಿರುವ ಎಲ್ಲಾ ಆಧಾರಗಳು ಮತ್ತು ಸಾಮಗ್ರಿಗಳನ್ನು ಬಂಧಿತ ವ್ಯಕ್ತಿಗೆ ಒದಗಿಸದಿದ್ದರೆ ಆ ವಿಧಿ ಅನ್ವಯಿಸುವುದಿಲ್ಲ ಎಂದು ಸಿಬಲ್ ಸ್ಪಷ್ಟಪಡಿಸಿದರು.
ಬಂಧನ ಆದೇಶದಲ್ಲಿ ಉಲ್ಲೇಖಿಸಿರುವ ಆಧಾರಗಳು, ಬಂಧನಕ್ಕೆ ಶಿಫಾರಸು ಮಾಡಿದ ದಾಖಲೆಗಳ ನಕಲು ಮಾತ್ರವಾಗಿದ್ದು, ಬಂಧನ ಪ್ರಾಧಿಕಾರವು ಈ ಕಾರ್ಯಮಾಡಿಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಅವರು ವಾದಿಸಿದರು.
ಬಂಧನಕ್ಕೆ ಉಲ್ಲೇಖಿಸಿರುವ ಹಲವು ಘಟನೆಗಳು ಮಾರ್ಚ್ 2024 ನಂತರದವುಗಳಾಗಿದ್ದು, ಜೂನ್ 8, 2025ರ ವೀಡಿಯೊವನ್ನೂ ಆಧಾರವಾಗಿ ಬಳಸಲಾಗಿದೆ. ಆದರೆ ನಿಜವಾದ ಕಾರಣವೆಂದು ಹೇಳಿರುವ ಸೆಪ್ಟೆಂಬರ್ 10, 11 ಮತ್ತು 24ರ ಘಟನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಾಂಗ್ಚುಕ್ಗೆ ಒದಗಿಸಿಲ್ಲ ಎಂದು ಸಿಬಲ್ ತಿಳಿಸಿದರು.
ಸೆಪ್ಟೆಂಬರ್ 25ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್ಗಳಲ್ಲಿ ವಾಂಗ್ಚುಕ್ ಅವರ ಭಾಷಣಕ್ಕೆ ಸಂಬಂಧಿಸಿದ ಆರೋಪಗಳಿಲ್ಲ. ಜನವರಿ 2026ರವರೆಗೆ ಆ ಎಫ್ಐಆರ್ಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಹಲವು ಎಫ್ಐಆರ್ಗಳಲ್ಲಿ ವಾಂಗ್ಚುಕ್ ಅವರ ಹೆಸರು ಕೂಡ ಉಲ್ಲೇಖಗೊಂಡಿಲ್ಲ ಎಂದು ವಾದ ಮಂಡಿಸಲಾಯಿತು.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ವಿಚಾರಣೆಯನ್ನು ವಿಳಂಬಗೊಳಿಸಲಾಗುವುದಿಲ್ಲ ಎಂದು ಪೀಠ ತಿಳಿಸಿದ್ದು, ಪ್ರಕರಣದ ವಿಚಾರಣೆ ಜ. 13 ಮುಂದುವರಿಯಲಿದೆ. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ವಾದ ಮಂಡಿಸಲಿದ್ದಾರೆ.







