ಸೋನಂ ವಾಂಗ್ಚುಕ್ ಶಾಂತಿಗಾಗಿ ಕರೆ ನೀಡಿದ್ದ ಭಾಷಣವನ್ನು ಮರೆಮಾಚಲಾಗಿದೆ: ಸುಪ್ರೀಂ ಕೋರ್ಟ್ಗೆ ತಿಳಿಸಿದ ವಕೀಲ ಕಪಿಲ್ ಸಿಬಲ್

photo credit: PTI
ಹೊಸದಿಲ್ಲಿ: ಲಡಾಖ್ನ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ಶಾಂತಿಗಾಗಿ ಕರೆ ನೀಡಿದ್ದ ಭಾಷಣವನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯ (ಎನ್ಎಸ್ಎ) ಬಂಧನ ಪ್ರಾಧಿಕಾರದಿಂದ ಮರೆಮಾಚಲಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
ವಾಂಗ್ಚುಕ್ರನ್ನು ಎನ್ಎಸ್ಎ ಅಡಿ ಬಂಧಿಸಿರುವುದು ಕಾನೂನಬಾಹಿರವಾಗಿದೆ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅರವಿಂದ ಕುಮಾರ ಮತ್ತು ಪ್ರಸನ್ನ ವರಾಳೆ ಅವರ ಪೀಠವು ಕೈಗೆತ್ತಿಕೊಂಡಿತ್ತು.
ಆಂಗ್ಮೋ ಪರ ವಕೀಲ ಸಿಬಲ್,ಬಂಧನ ಆದೇಶವನ್ನು ಅಮಾನ್ಯಗೊಳಿಸುವ,ಬಂಧಿತ ವ್ಯಕ್ತಿಗೆ ಅನುಕೂಲಕರವಾದ ವಿಷಯವನ್ನು ದಮನಿಸುವುದು ದುರುದ್ದೇಶವನ್ನು ಸೂಚಿಸುತ್ತದೆ ಎಂದು ವಾದಿಸಿದರು.
ಲಡಾಖ್ಗೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ಆಗ್ರಹಿಸಿ ಲೇಹ್ನಲ್ಲಿ ಸೆ.24ರಂದು ನಡೆದಿದ್ದ ಪ್ರತಿಭಟನೆಗಳ ಸಂದರ್ಭ ಪೋಲಿಸ್ ಗೋಲಿಬಾರ್ನಲ್ಲಿ ನಾಲ್ವರು ಮೃತಪಟ್ಟಿದ್ದರು. ಸೆ.26ರಂದು ವಾಂಗ್ಚುಕ್ರನ್ನು ಎನ್ಎಸ್ಎ ಅಡಿ ಬಂಧಿಸಿ,ಬಳಿಕ ರಾಜಸ್ಥಾನದ ಜೋಧಪುರ ಜೈಲಿಗೆ ಕರೆದೊಯ್ಯಲಾಗಿತ್ತು.
ವಾಂಗ್ಚುಕ್ ಅವರ ಬಂಧನ ಆದೇಶವು ಪ್ರಾಥಮಿಕವಾಗಿ ಸೆ.10 ಮತ್ತು ಸೆ.11ರ ಎರಡು ಹಾಗೂ ಸೆ.24ರ ಎರಡು ವೀಡಿಯೊಗಳನ್ನು ಆಧರಿಸಿದೆ ಎಂದು ವಾದಿಸಿದ ಸಿಬಲ್,ಬಂಧನಕ್ಕೆ ಕಾರಣಗಳನ್ನು ಸೆ.29ರಂದು ತಿಳಿಸಲಾಗಿದ್ದರೂ ಈ ನಾಲ್ಕು ವೀಡಿಯೊಗಳನ್ನು ವಾಂಗ್ಚುಕ್ಗೆ ಒದಗಿಸಲಾಗಿರಲಿಲ್ಲ. ಇದು ವ್ಯಕ್ತಿಗೆ ಬಂಧನದ ಕಾರಣವನ್ನು ತಿಳಿಯುವ ಹಕ್ಕನ್ನು ಖಾತರಿಗೊಳಿಸಿರುವ ಸಂವಿಧಾನದ ವಿಧಿ 22ನ್ನು ಉಲ್ಲಂಘಿಸಿದೆ ಎಂದು ಬೆಟ್ಟು ಮಾಡಿದರು.
ಬಂಧನಕ್ಕೆ ಆಧಾರವಾಗಿದ್ದ ಸಾಕ್ಷ್ಯಗಳನ್ನು ವಾಂಗ್ಚುಕ್ ಗೆ ಪೂರೈಸಲಾಗಿದೆ ಎಂದು ಕೇಂದ್ರವು ಹೇಳಿಕೊಂಡಿದೆಯಾದರೂ,ಈ ಹೇಳಿಕೆಯನ್ನು ದೃಢೀಕರಿಸಲು ಯಾವುದೇ ಪುರಾವೆಗಳಿಲ್ಲ. ಅಂತಿಮವಾಗಿ ಒದಗಿಸಿದ್ದು ವೀಡಿಯೊ ಲಿಂಕ್ಗಳನ್ನು ಮಾತ್ರ. ಸೆ.29ರಂದು ನೀಡಲಾಗಿದ್ದ ಪೆನ್ಡ್ರೈವ್ನಲ್ಲಿ ನಾಲ್ಕು ವೀಡಿಯೊಗಳಿರಲಿಲ್ಲ ಮತ್ತು ಲ್ಯಾಪ್ಟಾಪ್ನ್ನು ಅ.5ರಂದು ನೀಡಲಾಗಿತ್ತು ಎಂದು ಸಿಬಲ್ ವಾದಿಸಿದರು.
ವಾಂಗ್ಚುಕ್ ವೀಡಿಯೊಗಳು ಕಾಣೆಯಾಗಿವೆ ಎಂದು ತಿಳಿಸಿ ಮತ್ತು ಅವುಗಳ ಪ್ರತಿಗಳನ್ನು ಕೋರಿ ಕಸ್ಟಡಿಯಿಂದ ಪದೇ ಪದೇ ಪತ್ರಗಳನ್ನು ಬರೆದಿದ್ದರು,ಆದರೆ ಅವುಗಳನ್ನು ಎಂದೂ ನೀಡಲಾಗಿರಲಿಲ್ಲ ಎಂದೂ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು.
ಸಿಬಲ್ ನ್ಯಾಯಾಲಯದ ಅನುಮತಿಯೊಂದಿಗೆ ವಾಂಗ್ಚುಕ್ ಭಾಷಣದ ವೀಡಿಯೊವನ್ನು ಪ್ರದರ್ಶಿಸಿದರು ಮತ್ತು ಆಂದೋಲನವು ಶಾಂತಿಯುತವಾಗಿ ನಡೆಯಬೇಕು,ಹಿಂಸಾಚಾರ,ಕಲ್ಲು ಅಥವಾ ಬಾಣಗಳ ಮೂಲಕವಲ್ಲ ಎಂದು ವಾಂಗ್ಚುಕ್ ಸ್ಪಷ್ಟವಾಗಿ ಹೇಳಿದ್ದನ್ನು ಎತ್ತಿ ತೋರಿಸಿದರು.
ಭಾಷಣದ ಧಾಟಿಯು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವಂತೆ ಅಥವಾ ಹಿಂಸಾಚಾರವನ್ನು ಪ್ರಚೋದಿಸುವಂತೆ ಇರಲಿಲ್ಲ,ಬದಲಿಗೆ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಅನುಗುಣವಾಗಿತ್ತು ಎಂದು ಸಿಬಲ್ ತಿಳಿಸಿದರು.
ವಾಂಗ್ಚುಕ್ ತನ್ನ ಭಾಷಣದ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದರು ಎನ್ನುವುದು ಕೇಂದ್ರದ ಆರೋಪವಾಗಿದೆ.
ಬಂಧನ ಕಾನೂನಿನ ಪ್ರಕಾರ ಬಂಧನ ಪ್ರಾಧಿಕಾರಕ್ಕೆ ಸೆ.24ರಂದು ನಡೆದಿದ್ದ ಘಟನೆಯ ಕೇಂದ್ರಬಿಂದುವಾಗಿರುವ ನಿರ್ದಿಷ್ಟ ಸಂಗತಿಯು (ಹಿಂಸೆಯನ್ನು ಪ್ರಚೋದಿಸುವ ವೀಡಿಯೊ) ಗೊತ್ತಿದ್ದರೆ,ವಾಂಗ್ಚುಕ್ ಅವರು ತನ್ನ ಭಾಷಣದಲ್ಲಿ ಹಿಂಸಾಚಾರವನ್ನು ವಿರೋಧಿಸಿದ್ದನ್ನು ತೋರಿಸಿರುವ ವೀಡಿಯೊವನ್ನೂ ಅದು ಕೇಂದ್ರವಾಗಿ ಹೊಂದಿರಬೇಕು ಎಂದು ಸಿಬಲ್ ವಾದಿಸಿದರು.
ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಜ.12ಕ್ಕೆ ನಿಗದಿಗೊಳಿಸಿದೆ.







