ಪೌರತ್ವಕ್ಕೂ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು: ಸೋನಿಯಾ ಗಾಂಧಿಗೆ ದಿಲ್ಲಿ ನ್ಯಾಯಾಲಯದ ನೋಟಿಸ್

ಸೋನಿಯಾ ಗಾಂಧಿ | Photo Credit : X/@INCIndia
ಹೊಸದಿಲ್ಲಿ: ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು 1983ರಲ್ಲಿ ಭಾರತೀಯ ಪೌರತ್ವವನ್ನು ಪಡೆಯುವ ಮೊದಲೇ 1980ರ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದರು, ವಂಚನೆ ಮತ್ತು ಫೋರ್ಜರಿ ಅಪರಾಧಕ್ಕಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ಕೋರಿ ಸಲ್ಲಿಸಲಾಗಿರುವ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗೆ ಉತ್ತರಿಸುವಂತೆ ಸೂಚಿಸಿ ದಿಲ್ಲಿಯ ವಿಶೇಷ ನ್ಯಾಯಾಲಯವು ಮಂಗಳವಾರ ಸೋನಿಯಾ ಮತ್ತು ದಿಲ್ಲಿ ಪೋಲಿಸರಿಗೆ ನೋಟಿಸ್ಗಳನ್ನು ಹೊರಡಿಸಿದೆ.
1983ರ ಎಪ್ರಿಲ್ನಲ್ಲಿ ಭಾರತೀಯ ಪೌರತ್ವವನ್ನು ಪಡೆದಿದ್ದರೂ 1980ರಲ್ಲಿ ಹೊಸದಿಲ್ಲಿ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಕ್ಕಾಗಿ ಸೋನಿಯಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ನಿರ್ದೇಶನ ನೀಡಲು ನಿರಾಕರಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಿಕಾಸ ತ್ರಿಪಾಠಿ ಎನ್ನುವವರು ಸಲ್ಲಿಸಿರುವ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಧೀಶ ವಿಶಾಲ ಗೋಗ್ನೆ ಅವರು ಸೋನಿಯಾ ಮತ್ತು ದಿಲ್ಲಿ ಪೋಲಿಸರಿಗೆ ನೋಟಿಸ್ಗಳನ್ನು ಹೊರಡಿಸುವಂತೆ ಆದೇಶಿಸಿದರು.
ಸೆ.11ರಂದು ತ್ರಿಪಾಠಿಯವರ ಅರ್ಜಿಯನ್ನು ವಜಾಗೊಳಿಸಿದ್ದ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ವೈಭವ ಚೌರಾಸಿಯಾ ಅವರು,ಅರ್ಜಿದಾರರು ಸೋನಿಯಾ ವಿರುದ್ಧ ವಂಚನೆ ಮತ್ತು ಫೋರ್ಜರಿ ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ,ಆದರೆ ಅವರು ಆರೋಪಿಸಿರುವ ಅಪರಾಧಗಳನ್ನು ರೂಪಿಸಲು ಅಗತ್ಯವಾದ ಮೂಲಭೂತ ಅಂಶಗಳ ಕೊರತೆಯಿದೆ ಎಂದು ಹೇಳಿದ್ದರು.





