ಸರಕಾರ ಯಾವುದೇ ಚರ್ಚೆ, ಸಮಾಲೋಚನೆ ನಡೆಸದೆ MGNREGAವನ್ನು ರದ್ದುಗೊಳಿಸಿದೆ: ಸೋನಿಯಾ ಗಾಂಧಿ ವಾಗ್ದಾಳಿ

ಸೋನಿಯಾ ಗಾಂಧಿ | Photo Credit : PTI
ಹೊಸದಿಲ್ಲಿ,ಡಿ. 22: ಚಾರಿತ್ರಿಕ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ) ಯ ‘‘ಧ್ವಂಸ’’ ಗ್ರಾಮೀಣ ಭಾರತದ ಕೋಟ್ಯಂತರ ಜನರ ಮೇಲೆ ವಿನಾಶಕಾರಿ ಪರಿಣಾಮ ಉಂಟು ಮಾಡಲಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ ಸೋಮವಾರ ಹೇಳಿದ್ದಾರೆ.
ಎಲ್ಲರೂ ಸಂಘಟಿತರಾಗುವಂತೆ ಹಾಗೂ ನಾಗರಿಕರ ಹಕ್ಕುಗಳನ್ನು ರಕ್ಷಿಸುವಂತೆ ಅವರು ಆಗ್ರಹಿಸಿದ್ದಾರೆ.ರೆ̤
‘ಹಿಂದೂ’ ಪತ್ರಿಕೆಯ ‘‘ದಿ ಬುಲ್ಡೋಜ್ಡ್ ಡೆಮೋಲಿಶನ್ ಆಫ್ ಎಂನರೇಗಾ’’ ಶೀರ್ಷಿಕೆಯ ಸಂಪಾದಕೀಯದಲ್ಲಿ ಕಾಂಗ್ರೆಸ್ನ ಮಾಜಿ ವರಿಷ್ಠೆ, ‘‘ಎಂನರೇಗಾದ ರದ್ದು ಸಂಘಟಿತ ವಿಫಲತೆ’’ ಎಂದು ಹೇಳಿದ್ದಾರೆ.
‘‘ಮಹಾತ್ಮಾ ಗಾಂಧಿ ಅವರ ಸರ್ವೋದಯ (ಎಲ್ಲರ ಕಲ್ಯಾಣ) ಕಲ್ಪನೆಯನ್ನು ಎಂನರೇಗಾ ಸಾಕಾರಗೊಳಿಸಿತು ಹಾಗೂ ಸಂವಿಧಾನ ಭರವಸೆ ನೀಡಿದಂತೆ ಜನರು ಉದ್ಯೋಗ ಪಡೆಯುವ ಕಾನೂನು ಬದ್ಧ ಖಾತರಿ ನೀಡಿತು’’ ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನರೇಂದ್ರ ಮೋದಿ ಸರಕಾರ ಯಾವುದೇ ಚರ್ಚೆ, ಸಮಾಲೋಚನೆ, ಅಥವಾ ಸಂಸದೀಯ ಪ್ರಕ್ರಿಯೆಗಳು ಅಥವಾ ಕೇಂದ್ರ-ರಾಜ್ಯ ಸಂಬಂಧಗಳನ್ನು ಗೌರವಿಸದೆ ಎಂನರೇಗಾವನ್ನು ರದ್ದುಗೊಳಿಸಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.
MGNREGA ರದ್ದು ಹಿಂಪಡೆಯುವಂತೆ ಆಗ್ರಹಿಸಿ ಕಾಂಗ್ರೆಸ್ನಿಂದ ಸಾರ್ವಜನಿಕ ಆಂದೋಲನ: ಜೈರಾಮ್ ರಮೇಶ್
ಎಂನರೇಗಾವನ್ನು ರದ್ದುಗೊಳಿಸಿರುವುದನ್ನು ಹಿಂಪಡೆಯುವಂತೆ ಆಗ್ರಹಿಸಿ ಸಾರ್ವಜನಿಕ ಆಂದೋಲನ ನಡೆಸಲು ಪಕ್ಷ ಯೋಜಿಸಿರುವುದಾಗಿ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಸೋಮವಾರ ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನ ಪೋಸ್ಟ್ನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ)ಯ ಹಿನ್ನೆಲೆಯನ್ನು ಅವರು ಹಂಚಿಕೊಂಡಿದ್ದಾರೆ.







