ಸೋನು ನಿಗಮ್ ಗೆ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿ ಪ್ರದಾನ

ಸೋನು ನಿಗಮ್ | PHOTO : PTI
ಇಂದೋರ್(ಮ.ಪ್ರ),ಸೆ.29: ಲಘು ಸಂಗೀತ ಕ್ಷೇತ್ರಕ್ಕೆ ನೀಡಿರುವ ಅಪಾರ ಕೊಡುಗೆಗಾಗಿ ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ರವಿವಾರ ಇಲ್ಲಿ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಲತಾ ಮಂಗೇಶ್ಕರ್ ಅವರ 96ನೇ ಜನ್ಮದಿನದ ಪ್ರಯುಕ್ತ ಅವರ ಜನನ ಸ್ಥಳವಾದ ಇಂದೋರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ನಿಗಮ್ ಗೆ ಪ್ರಶಸ್ತಿಯನ್ನು ಪ್ರದಾನಿಸಿದರು.
ಭಾರತರತ್ನ ಲತಾ ಮಂಗೇಶ್ಕರ್ ಅವರು ತನ್ನ ಕಂಠಸಿರಿಯೊಂದಿಗೆ ಭಾರತೀಯ ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದರು. ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಈ ಪ್ರಶಸ್ತಿಯು ವಿಶಿಷ್ಟವಾಗಿದೆ. ಇದು ಸಂಗೀತ ಕ್ಷೇತ್ರದಲ್ಲಿ ಅಳಿಸಲಾದ ಛಾಪು ಮೂಡಿಸಿರುವ ಕಲಾವಿದರ ಕೊಡುಗೆಗೆ ನೀಡುವ ಗೌರವವಾಗಿದೆ ಎಂದು ಯಾದವ್ ಹೇಳಿದರು.
ಗೌರವಕ್ಕೆ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ 52ರ ಹರೆಯದ ನಿಗಮ್, ‘ಮೂರು ದಶಕಗಳ ಹಿಂದೆ ಲತಾ ಮಂಗೇಶ್ಕರ್ ಅಲಂಕರಣ ಕಾರ್ಯಕ್ರಮದಲ್ಲಿ ಹಾಡಿದ್ದ ನಾನು ಇಂದು ಅದೇ ವೇದಿಕೆಯಲ್ಲಿ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಲತಾಜಿ ಕೇವಲ ಸ್ಫೂರ್ತಿಯಲ್ಲ,ಅವರು ಸಂಗೀತದ ಜೀವಂತ ಸಂಪ್ರದಾಯವೂ ಆಗಿದ್ದಾರೆ. ಈ ಗೌರವ ಸ್ವೀಕರಿಸಿ ನಾನು ಧನ್ಯನಾಗಿದ್ದೇನೆ. ಇದು ನನ್ನ ಜೀವನದ ಅತ್ಯಂತ ವಿಶೇಷ ಘಳಿಗೆಗಳಲ್ಲಿ ಒಂದಾಗಿದೆ ’ಎಂದು ಹೇಳಿದರು.
ಇಂದೋರಿನಲ್ಲಿ 1929,ಸೆ.28ರಂದು ಜನಿಸಿದ್ದ ಲತಾ ಮಂಗೇಶ್ಕರ್ 2020, ಫೆ.6ರಂದು ಮುಂಬೈನಲ್ಲಿ 92ನೇ ವಯಸ್ಸಿನಲ್ಲಿ ನಿಧನರಾದರು.
ಮಧ್ಯಪ್ರದೇಶ ಸರಕಾರವು 1984ರಲ್ಲಿ ಸ್ಥಾಪಿಸಿದ ಈ ವಾರ್ಷಿಕ ಪ್ರಶಸ್ತಿಯನ್ನು ಲಘು ಸಂಗೀತ ಕ್ಷೇತ್ರದಲ್ಲಿ ಸಾಧಕರಿಗೆ ಪ್ರದಾನಿಸಲಾಗುತ್ತದೆ.
ಈ ಹಿಂದೆ ನೌಷಾದ್,ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಅವರಂತಹ ದಿಗ್ಗಜರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.







