ಅತ್ಯಂತ ದುರದೃಷ್ಟಕರ: ಕರ್ನಲ್ ಸೋಫಿಯಾ ಖುರೇಶಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಎನ್ಸಿಡಬ್ಲ್ಯುಖಂಡನೆ

ಕರ್ನಲ್ ಸೋಫಿಯಾ ಖುರೇಶಿ | PTI
ಹೊಸದಿಲ್ಲಿ: ಕರ್ನಲ್ ಸೋಫಿಯಾ ಖುರೇಶಿ ವಿರುದ್ಧದ ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ(ಎನ್ಸಿಡಬ್ಲ್ಯು)ವು, ಸಮವಸ್ತ್ರದಲ್ಲಿರುವ ಮಹಿಳೆಯರನ್ನು ಗೌರವಿಸುವಂತೆ ಕರೆ ನೀಡಿದೆ.
ಆಯೋಗದ ಅಧ್ಯಕ್ಷೆ ವಿಜಯಾ ರಹತ್ಕರ್ ಅವರು ಯಾರನ್ನೂ ಹೆಸರಿಸದಿದ್ದರೂ,ಮಧ್ಯಪ್ರದೇಶದ ಸಚಿವ ವಿಜಯ ಶಾ ಅವರು ಖುರೇಶಿ ವಿರುದ್ಧ ಆಡಿದ್ದ ಮಾತುಗಳು ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿದ ಬಳಿಕ ಅವರ ಹೇಳಿಕೆ ಹೊರಬಿದ್ದಿದೆ.
‘ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಕೆಲವು ವ್ಯಕ್ತಿಗಳು ಮಹಿಳೆಯರ ಕುರಿತು ಇಂತಹ ಅವಹೇಳನಕಾರಿ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ದುರದೃಷ್ಟಕರ. ಇದು ನಮ್ಮ ಸಮಾಜದಲ್ಲಿಯ ಮಹಿಳೆಯರ ಘನತೆಗೆ ಧಕ್ಕೆಯುಂಟು ಮಾಡಿದ್ದು ಮಾತ್ರವಲ್ಲ,ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳಿಗೆ ಮಾಡಿರುವ ಅವಮಾನವೂ ಆಗಿದೆ’ ಎಂದು ರಹತ್ಕರ್ ಎಕ್ಸ್ ಪೋಸ್ಟ್ನಲ್ಲಿ ಕಿಡಿಕಾರಿದ್ದಾರೆ.
‘ಪ್ರೀತಿಯ ಕರ್ನಲ್ ಸೋಫಿಯಾ ಖುರೇಶಿ ಈ ದೇಶದ ಹೆಮ್ಮೆಯ ಮಗಳಾಗಿದ್ದಾರೆ,ದೇಶವನ್ನು ಪ್ರೀತಿಸುವ ಎಲ್ಲ ಭಾರತೀಯರ ಸಹೋದರಿಯಾಗಿದ್ದಾರೆ. ಅವರು ಧೈರ್ಯ ಮತ್ತು ಸಮರ್ಪಣಾ ಭಾವದಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ’ ಎಂದು ಹೇಳಿರುವ ರಹತ್ಕರ್,ಅವರಂತಹ ಧೀರ ಮಹಿಳೆಯರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಮತ್ತು ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಬೇಕು ಎಂದು ಹೇಳಿದ್ದಾರೆ.
ವಿಜಯ ಶಾ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ವೀಡಿಯೊವನ್ನು ಕಾಂಗ್ರೆಸ್ ಹಂಚಿಕೊಂಡಿದೆ. ‘ನಮ್ಮ ಸೋದರಿಯರ ಹಣೆಯ ಮೇಲಿನ ಸಿಂಧೂರವನ್ನು ಅಳಿಸಿದವರ ಸೋದರಿಯನ್ನೇ ಅವರಿಗೆ ತಕ್ಕ ಪಾಠವನ್ನು ಕಲಿಸಲು ನಾವು ಕಳುಹಿಸಿದ್ದೇವೆ’ ಎಂದು ಶಾ ತನ್ನ ಭಾಷಣದಲ್ಲಿ ಹೇಳಿದ್ದರು. ಬಳಿಕ ಅವರು ‘ನನ್ನ ಮಾತುಗಳು ಸಮಾಜ ಮತ್ತು ಧರ್ಮಕ್ಕೆ ನೋವನ್ನುಂಟು ಮಾಡಿದ್ದರೆ ಹತ್ತು ಸಲ ಕ್ಷಮೆ ಯಾಚಿಸಲು ನಾನು ಸಿದ್ಧನಿದ್ದೇನೆ ’ಎಂದು ಹೇಳಿದ್ದರು.
ಹಲವಾರು ವಿಭಾಗಗಳಲ್ಲಿ ಹುಡುಗರಿಗಿಂತ ಹುಡುಗಿಯರೇ ಮೇಲುಗೈ ಸಾಧಿಸಿರುವ ಇತ್ತೀಚಿನ ಸಿಬಿಎಸ್ಇ ಫಲಿತಾಂಶಗಳನ್ನೂ ಉಲ್ಲೇಖಿಸಿರುವ ರಹತ್ಕರ್,ಮಹಿಳೆಯರ ಬಗ್ಗೆ ಗೌರವಯುತ ಮನೋಭಾವವನ್ನು ಬೆಳೆಸಿಕೊಳ್ಳುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ದೇಶವು ಪ್ರಗತಿಯತ್ತ ಸಾಗಲು ಮಹಿಳೆಯರು ಪ್ರತಿಯೊಂದೂ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸುವುದು ಅಗತ್ಯವಾಗಿದೆ ಎಂದಿದ್ದಾರೆ.
ಸಾರ್ವಜನಿಕ ಭಾಷಣಗಳಲ್ಲಿ ಘನತೆಯನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿರುವ ಅವರು,ಮಹಿಳೆಯರ ಕುರಿತು ಗೌರವಯುತ ಭಾಷೆ ಮತ್ತು ಮನೋಭಾವವನ್ನು ರೂಢಿಸಿಕೊಳ್ಳುವಂತೆ ಪ್ರತಿಯೊಬ್ಬರನ್ನೂ ಆಗ್ರಹಿಸಿದ್ದಾರೆ.
ಮಹಿಳೆಯರ ಭಾಗವಹಿಸುವಿಕೆ ಮತ್ತು ಕೊಡುಗೆಗಳನ್ನು ಕೀಳಂದಾಜಿಸುವುದು ಸ್ವೀಕಾರಾರ್ಹವಲ್ಲ ಮಾತ್ರವಲ್ಲ, ದೇಶದ ಅಭಿವೃದ್ಧಿಗೂ ಅಡ್ಡಿಯಾಗಿದೆ ಎಂದು ರಹತ್ಕರ್ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.