ಸೋಫಿಯಾ ಖುರೇಷಿಯ ಡಿಫೇಕ್ ವೀಡಿಯೊ ಪ್ರಸಾರ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸೋಫಿಯಾ ಖುರೇಷಿಯ , ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಕರ್ನಲ್ ಸೋಫಿಯಾ ಖುರೇಷಿ ಅವರ ಎಐ ಸೃಷ್ಟಿಸಿದ ಡಿಫೇಕ್ ವೀಡಿಯೊ ಪ್ರಸಾರ ಆರೋಪಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಷ್ಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಇಂತಹ ಆನ್ಲೈನ್ ಅಂಶಗಳನ್ನು ನಿರ್ವಹಿಸಲು ಮಾದರಿ ಕಾನೂನು ರೂಪಿಸಲು ನ್ಯಾಯಾಲಯ ಮೇಲ್ವಿಚಾರಣೆಯ ತಜ್ಞರ ಸಮಿತಿ ರೂಪಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರಿತ್ತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಎನ್. ಕೋಟೀಶ್ವರ ಸಿಂಗ್ ಅವರ ಪೀಠ ‘‘ಇದು ಗಂಭೀರ ವಿಷಯ’’ ಎಂಬ ದೂರುದಾರ ನರೇಂದ್ರ ಕುಮಾರ್ ಗೋಸ್ವಾಮಿ ಅವರ ವಾದವನ್ನು ಒಪ್ಪಿಕೊಂಡಿತು. ಆದರೆ, ಇದೇ ರೀತಿಯ ವಿಷಯಗಳನ್ನು ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ವಿಚಾರಣೆ ನಡೆಸುತ್ತಿದೆ ಎಂದು ಹೇಳಿತು.
‘‘ಇದು ಗಂಭೀರ ವಿಷಯ ಅಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ, ದಿಲ್ಲಿ ಉಚ್ಚ ನ್ಯಾಯಾಲಯ ಕಳೆದ ಎರಡು ವರ್ಷಗಳಿಂದ ಈ ವಿಷಯದ ಕುರಿತು ವಿಚಾರಣೆ ನಡೆಸುತ್ತಿದೆ. ನಾವು ಈ ಅರ್ಜಿಯನ್ನು ಪುರಷ್ಕರಿಸಿದರೆ, ಉಚ್ಚ ನ್ಯಾಯಾಲಯ ಬಾಕಿ ಇರುವ ಪ್ರಕರಣದ ವಿಚಾರಣೆ ನಿಲ್ಲಿಸಬಹುದು. ಅಲ್ಲದೆ, ಅದು ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗಬಹುದು. ನೀವು ದಿಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸುವುದು ಸೂಕ್ತ ಎಂಬುದು ನಮ್ಮ ಅಭಿಪ್ರಾಯ’’ ಎಂದು ಪೀಠ ಹೇಳಿದೆ.
‘ಆಪರೇಷನ್ ಸಿಂಧೂರ’ದ ಬಗ್ಗೆ ಮಾಹಿತಿ ನೀಡಿದ ತಂಡದ ಭಾಗವಾಗಿದ್ದ ಖುರೇಶಿ ಅವರು ಡೀಪ್ಫೇಕ್ ವೀಡಿಯೊ ಪ್ರಸರಣದಿಂದ ತಾನು ವಿಚಲಿತನಾಗಿದ್ದೇನೆ ಎಂದು ಗೋಸ್ವಾಮಿ ಹೇಳಿದ್ದಾರೆ. ಆನ್ಲೈನ್ನಲ್ಲಿ ಪ್ರಸಾರವಾಗುತ್ತಿರುವ ಖುರೇಶಿ ಅವರ ಹಲವು ವೀಡಿಯೊಗಳನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ಸೈಬರ್ ಅಪರಾಧಿಗಳು ಸೈಬರ್ ಅಪರಾಧ ನಿಯಂತ್ರಣ ಅಧಿಕಾರಿಗಳಿಗಿಂತ ಎಷ್ಟು ವೇಗವಾಗಿದ್ದಾರೆ ಎಂದರೆ, ದೂರುದಾರರು ನ್ಯಾಯಾಲಯದಿಂದ ಹೊರ ಹೋಗುವುದಕ್ಕಿಂತ ಮುನ್ನವೇ ಹೊಸ ವೀಡಿಯೊ ಅಪ್ಲೋಡ್ ಆಗಿರುತ್ತದೆ ಎಂದು ಪೀಠ ಹೇಳಿದೆ.







